ಬೆಂಗಳೂರು:ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಕಲಬುರಗಿಯಲ್ಲಿ ಲೋಕಾ ದಾಳಿ: ಕಲಬುರಗಿಯಲ್ಲಿ ಎರಡು ಕಡೆ ಹಾಗೂ ಹಾವೇರಿಯಲ್ಲಿ ನಾಲ್ಕು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು (ಸೋಮವಾರ) ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆಯ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಎಸ್.ಎಸ್. ಕರ್ನೂಲ್ ನೇತೃತ್ವದಲ್ಲಿ ಬೀದರ ವಲಯ ಅರಣ್ಯಾಧಿಕಾರಿ ಮತ್ತು ದೇವದುರ್ಗದ ಕೆಬಿಜೆಎನ್ಎಲ್ ಇಇ ನಿವಾಸಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.
ಹಾವೇರಿಯಲ್ಲಿ ಅಧಿಕಾರಿಗಳಿಗೆ ಶಾಕ್ ಕೊಟ್ಟ ಲೋಕಾ:ಇನ್ನೂ ಹಾವೇರಿಯಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಹಾವೇರಿಯ ಆರ್ಎಫ್ಓ ಅವರ ಎರಡು ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಾವೇರಿ ಆರ್ಎಫ್ಓ ಅವರ ಹಾವೇರಿ ಮನೆ ಮತ್ತು ಕಚೇರಿ ಸೇರಿದಂತೆ ಏಕಕಾಲಕ್ಕೆ ಒಟ್ಟು ನಾಲ್ಕು ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮತ್ತೊಬ್ಬ ಆರ್ಎಫ್ಓ ಮನೆ ಹಾಗೂ ಕಚೇರಿಗಳ ಮೇಲೂ ಸಹ ದಾಳಿ ನಡೆದಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲಿಸುತ್ತಿದ್ದಾರೆ.
ರಾಯಚೂರಿನಲ್ಲಿ ಲೋಕಾಯುಕ್ತ ದಾಳಿ:ರಾಯಚೂರು ಜಿಲ್ಲೆಯ ನಿರ್ಮಿತಿ ಕೇಂದ್ರ, ಕ್ಯಾಷ್ಯುಟೆಕ್ ಯೋಜನಾ ನಿರ್ದೇಶಕರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ರಾಯಚೂರು ಲೋಕಾಯುಕ್ತ ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ ನೇತೃತ್ವದಲ್ಲಿ ದಾಳಿ ನಡೆದಿದೆ. ನಗರದ ಗಂಗಾಪರಮೇಶ್ವರಿ ಕಾಲೋನಿಯಲ್ಲಿನ ಮನೆ ಕಚೇರಿ, ಸಂಬಂಧಿಕರ ಮನೆಗಳ ಮೇಲೆ ಏಕಕಾಲಕ್ಕೆ ನಾಲ್ಕು ಕಡೆ ದಾಳಿ ನಡೆಸುವ ಮೂಲಕ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.