ಕಲಬುರಗಿ: ಕೋವಿಡ್ ಅದೆಷ್ಟೋ ಮಂದಿಯನ್ನು ಸಂಕಷ್ಟಕ್ಕೀಡು ಮಾಡಿದೆ. ನಿತ್ಯ ದುಡಿದು ತಿನ್ನುವವರ ಜೀವನ ನಿರ್ವಹಣೆ ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಮೂಡಿದೆ. ದೂರದ ಉತ್ತರ ಪ್ರದೇಶದಿಂದ ಬದುಕು ಕಟ್ಟಿಕೊಳ್ಳಲು ಬಂದಿರುವ ರಸ್ತೆ ಬದಿಯ ವ್ಯಾಪಾರ ಮಾಡುವವರು ಅನ್ನಕ್ಕಾಗಿ ಪರದಾಡುವಂತಾಗಿದೆ.
ಉತ್ತರ ಪ್ರದೇಶದಿಂದ ಬದುಕು ಕಟ್ಟಿಕೊಳ್ಳಲು ಬಂದು ನಗರದ ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿರುವ ಜಿಡಿಎ ಲೇಔಟ್‌ನಲ್ಲಿ ವಾಸಿಸುವ 20 ಬಡ ಕುಟುಂಬಗಳ 150 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನವಿಡೀ ಡೋಲಕ್ (ತಬಲಾ) ಮಾರಾಟ ಮಾಡಿ ಅದರಲ್ಲಿ ಬರುವ ಅಲ್ಪ ಲಾಭದಲ್ಲಿ ಜೀವನ ನಡೆಸುತ್ತಿದ್ದರು. ಆದರೆ, ಕರ್ಫ್ಯೂ, ಲಾಕ್‌ಡೌನ್ ಆರಂಭವಾದಾಗಿನಿಂದ ಡೋಲಕ್ ಮಾರಾಟ ಮಾಡಲು ಅವಕಾಶ ಸಿಗದೇ ಒಂದೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದಾರೆ.
ಇದನ್ನೂ ಓದಿ:ತಮ್ಮ ಯಡವಟ್ಟಿನ ಬಗ್ಗೆ ವರದಿ ಮಾಡ್ತಿದ್ದ ಮಾಧ್ಯಮಗಳ ಜತೆ ಬಿಮ್ಸ್ ಸಿಬ್ಬಂದಿ ವಾಗ್ವಾದ!
ಕೈಯಲ್ಲಿ ಕೆಲಸವಿಲ್ಲ, ಮನೆಯಲ್ಲಿ ಅಕ್ಕಿ ಇಲ್ಲ, ಮನೆ ಮನೆಗೆ ಹೋಗಿ ಸಹಾಯ ಕೇಳಬೇಕೆಂದರೆ ಕೊರೊನಾ ಬರುತ್ತೆ ಎಂದು ಗದರಿಸಿ ಕಳುಹಿಸುತ್ತಾರೆ. ಮಕ್ಕಳಿಗೆ ಅನಾರೋಗ್ಯ ಕಾಡಿದರೆ ಅವರಿಗೆ ಆಸ್ಪತ್ರೆಗೆ ತೋರಿಸಲು ಹಣವಿಲ್ಲ, ಹೀಗೆ ಸಮಸ್ಯೆಗಳ ನಡುವೆ ಜೀವನ ನಡೆಸುತ್ತಿದ್ದಾರೆ. ಅಧಿಕಾರಿಗಳು, ಸಂಘಟನೆಯವರು ಹೀಗೆ ಯಾರಾದರೂ ಇವರ ನೆರವಿಗೆ ಬರಬೇಕಿದೆ.
ಈ ಬಗ್ಗೆ ಮಾತನಾಡಿದ ಡೋಲಕ್ ತಯಾರಕ ಮಹ್ಮದ್ ಸಲಿಂ, ಊಟ ತಿಂಡಿಗೂ ನಮ್ಮತ್ರ ಹಣವಿಲ್ಲ. 2 ತಿಂಗಳಿಂದಲೂ ಕೆಲಸವಿಲ್ಲ. ಕೆಲಸ ಮಾಡಲು ಹೊರಗೆ ಹೋದರೆ ಪೊಲೀಸರು ಹೊಡೆಯುತ್ತಾರೆ. ಸರ್ಕಾರ ನಮ್ಮ ನೆರವಿಗೆ ಬರದಿದ್ದೆರೆ ನಾವು, ಮಕ್ಕಳು ಹಸಿವಿನಲ್ಲೇ ಸಾಯಬೇಕಾಗುತ್ತದೆ. ಡೋಲಕ್ ಮಾರಿಕೊಂಡು ಜೀವನ ನಡೆಸುತ್ತಿದ್ದೇವೆ. ಡೋಲಕ್ ಮಾರಾಟವಾದರೆ ನಮಗೆ ಹೊಟ್ಟಗೆ ತಿನ್ನಲು ಸಿಗುತ್ತದೆ. ಆದ್ರೆ ಡೋಲಕ್ ಮಾರಲು ಹೋದರೆ ಪೊಲೀಸರು ಹೊಡೆಯುತ್ತಾರೆ. ನಮಗೆ ಸಹಾಯ ಮಾಡಲು ಯಾರೂ ಸಹ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.