ಕಲಬುರಗಿ: ಕಲಬುರಗಿಯ ಮಣ್ಣೂರು ಗ್ರಾಮದಲ್ಲಿ ಹಿಂದೂ-ಮುಸ್ಲಿಮರು ಭಾವೈಕ್ಯತೆಯ 'ಲೋಬಂಡಿ ಜಾತ್ರೆ'ಯನ್ನು ನೂರಾರು ವರ್ಷಗಳಿಂದ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಕರಾವಳಿಯಲ್ಲಿ ಕಂಬಳ ಕೆಸರುಗದ್ದೆಯಲ್ಲಿ ನಡೆದರೆ, ಕಲಬುರಗಿಯ ಲೋಬಂಡಿ ಜಾತ್ರೆ ಉಳುಮೆ ಮಾಡುವ ಜಮೀನಲ್ಲಿ ನಡೆಯುತ್ತದೆ.
ಕಾರ ಹುಣ್ಣಿಮೆಗೂ ಎರಡು ದಿನ ಮುಂಚಿತವಾಗಿ ಈ ಲೋಬಂಡಿ ಜಾತ್ರೆಯನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಮಣ್ಣೂರು, ರಾಮನಗರ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಗರು ಪಕ್ಕದ ಮಹಾರಾಷ್ಟ್ರದ ಹೈದ್ರಾ ಗ್ರಾಮದಲ್ಲಿರುವ ಐತಿಹಾಸಿಕ ಹಾಜಿ ಖ್ವಾಜಾ ಸೈಫಲ್ ಮುಲೂಕ್ ಚಿಸ್ತಿ ದರ್ಗಾಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಲೋಬಂಡಿಯಲ್ಲಿ ಆಹಾರ ಪದಾರ್ಥಗಳನ್ನು ಒಯ್ದು ದರ್ಗಾಗೆ ತೆರಳುವ ಜನರು ಅಲ್ಲಿ ಪೂಜೆ ಸಲ್ಲಿಸುತ್ತಾರೆ. ಪೂಜೆ ಬಳಿಕ ದರ್ಗಾದ ಮೌಲ್ವಿಗಳಿಗೆ ಮೊದಲು ಪ್ರಸಾದ ವಿತರಿಸಿ ಬಳಿಕ ಜನರಿಗೆ ಪ್ರಸಾದ ವಿತರಿಸಲಾಗುತ್ತದೆ. ರಾತ್ರಿ ಇಡೀ ದರ್ಗಾದಲ್ಲಿಯೇ ಕಾಲ ಕಳೆದು ಮಾರನೇ ದಿನ ಮತ್ತೆ ಬೆಳಿಗ್ಗೆ ಪೂಜೆ ಸಲ್ಲಿಸಿ ಹಿಂದೂ-ಮುಸ್ಲಿಮರು ಸೇರಿ ಜಾತ್ರೆ ಆಚರಿಸುತ್ತಾರೆ.
ಹಿನ್ನೆಲೆ: ಮಣ್ಣೂರ ಗ್ರಾಮದ ಕರೂಟಿ ಅನ್ನೋ ಕುಟುಂಬಸ್ಥರ ಮೂಲಕ ಈ ಲೋಬಂಡಿ ಜಾತ್ರೆ ಆಚರಣೆ ಚಾಲ್ತಿಗೆ ಬಂದಿದೆ. ಕರೂಟಿ ಕುಟುಂಬಸ್ಥರು ಸುಮಾರು 600 ವರ್ಷಗಳಿಂದ ದರ್ಗಾದಲ್ಲಿ ಪೂಜೆ ಸಲ್ಲಿಸಿ ಲೋಬಂಡಿ ಜಾತ್ರೆ ಆಚರಿಸುತ್ತಾ ಬರುತ್ತಿದ್ದಾರೆ. ಲೋಬಂಡಿ ಅಂದ್ರೆ ಎತ್ತಿನ ಬಂಡಿ. ಲೋಬಂಡಿ ಜಾತ್ರೆಗಾಗಿಯೇ ಪ್ರತಿವರ್ಷ ಒಂದೇ ದಿನದಲ್ಲಿ ಎತ್ತಿನ ಬಂಡಿಗಳನ್ನು ಸಿದ್ಧಪಡಿಸುತ್ತಾರೆ.