ಸೇಡಂ :ಕೊರೊನಾ ಸಾವಿನ ಪ್ರಕರಣಗಳ ಹೆಚ್ಚಳ ಮತ್ತು ಆತಂಕದ ವಾತಾವರಣ ನಿರ್ಮಾಣವಾದ ಹಿನ್ನೆಲೆ ಸ್ವಯಂ ಲಾಕ್ಡೌನ್ಗೆ ಸಂಘ-ಸಂಸ್ಥೆಗಳು ಸೈ ಎಂದಿವೆ.
ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಸ್ಥಳೀಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಂಘ-ಸಂಸ್ಥೆಗಳ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲೆಯಲ್ಲಿ ಬೆಡ್ಗಳ ಮತ್ತು ಆಕ್ಸಿಜನ್ ಕೊರತೆ ತಲೆದೂರಿದೆ. ಸರಿಯಾದ ಚಿಕಿತ್ಸೆ ಸಿಗದೆ ಯುವ ಸಮೂಹ ಸಹ ಕೊರೊನಾಗೆ ಬಲಿಯಾಗುತ್ತಿರುವ ಹಿನ್ನೆಲೆ ಜೀವ ಇದ್ದರೆ ಜೀವನ ಎಂಬಂತೆ ಸ್ವಯಂ ನಿರ್ಬಂಧಕ್ಕೆ ಮುಂದಾಗಲು ತೀರ್ಮಾನಿಸಲಾಗಿದೆ.
ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಮಾತನಾಡಿ, ವಿದ್ಯಾವಂತರಿಂದಲೇ ಕೊರೊನಾ ಹರಡುವಿಕೆ ಜಾಸ್ತಿಯಾಗಿದೆ. ಅಪಪ್ರಚಾರ ಮಾಡುವವರ ಕಡಿವಾಣ ಅಗತ್ಯ. ಕಲ್ಯಾಣ ಮಂಟಪ ಬುಕ್ ಮಾಡಿದವರಿಗೆ ತಹಶೀಲ್ದಾರ್ ಅನುಮತಿ ಕಡ್ಡಾಯ ಮಾಡಲಾಗಿದೆ. ಕೋಣೆಗಳ ಅವಶ್ಯಕತೆ ಇದ್ದಲ್ಲಿ ಶಾಲೆಯನ್ನು ಬಿಟ್ಟು ಕೊಡಲು ಸಂಸ್ಥೆ ಸಿದ್ಧವಿದೆ ಎಂದು ಹೇಳಿದರು.
ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಂಘ-ಸಂಸ್ಥೆಗಳ ಸಭೆ.. ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ಭಕ್ತರನ್ನು ದೂರವಾಣಿಯಲ್ಲೇ ವಿಚಾರಿಸಿ, ತಿಥಿ ಪಂಚಾಂಗ ತಿಳಿಸುತ್ತಿದ್ದೇನೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದರು.
ಹಿರಿಯ ವೈದ್ಯ ಡಾ. ಉದಯಕುಮಾರ ಶಹಾ ಮಾತನಾಡಿ, ಕೊರೊನಾ ಪ್ರಕರಣಗಳು ಕಡಿಮೆಯಾಗಬೇಕಾದಲ್ಲಿ ಲಾಕ್ಡೌನ್ ಅವಶ್ಯಕ. ವ್ಯಾಕ್ಸಿನ್‌ಗಿಂತಲೂ ಮಾಸ್ಕ್ ಅವಶ್ಯಕ ಎಂದರು.
ನಿಸರ್ಗ ಆಸ್ಪತ್ರೆಯ ನಿರ್ದೇಶಕ ಡಾ. ಶ್ರೀನಿವಾಸ ಮೊಕದಮ್ ಮಾತನಾಡಿ, ದಿನಕ್ಕೆ ಲಕ್ಷ ರೂ. ನೀಡಿದರೂ ಸಹ ರಾಜ್ಯ ಸೇರಿದಂತೆ ಗಡಿಯ ತೆಲಂಗಾಣ, ಮಹಾರಾಷ್ಟ್ರದಲ್ಲೂ ಬೆಡ್ ಸಿಗ್ತಿಲ್ಲ. ಕೊರೊನಾ ಮಹಾಮಾರಿ ಗಾಳಿಯಲ್ಲಿ ಸೇರಿಕೊಂಡಿದೆ. ಹಳ್ಳಿಯಲ್ಲೇ ಇರಿ, ದಿಲ್ಲಿಯಲ್ಲೇ ಇರಿ ಕೊರೊನಾ ಬರುತ್ತೆ ಎಂದರು.