ಕಲಬುರಗಿ:ಚುನಾವಣೆ ಹತ್ತಿರ ಬರುತ್ತಿದ್ದಂತೆ ಆಡಳಿತರೂಢ ಬಿಜೆಪಿ ಕಲ್ಯಾಣ ಕರ್ನಾಟಕ ಭಾಗವನ್ನೇ ಪದೇ ಪದೇ ಟಾರ್ಗೆಟ್ ಮಾಡ್ತಿದೆ. ಅಷ್ಟಕ್ಕೂ ಪ್ರಧಾನಿ ಮೋದಿ ಬಂದು ಹೋದ ಬೆನ್ನಲ್ಲೇ ಇದೀಗ ಸಿಎಂ ಬೊಮ್ಮಾಯಿ ಕಲ್ಯಾಣ ಕರ್ನಾಟಕ ಭಾಗದ ಹೆಬ್ಬಾಗಿಲು ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ದಿವಂಗತ ವಿಠಲ್ ಹೇರೂರ್ ಅವರ ಮೂರ್ತಿ ಅನಾವರಣ ಮಾಡುವ ಮೂಲಕ ಕೋಲಿ ಮತ್ತು ಕಬ್ಬಲಿಗ ಸಮಾಜದ ಮತಗಳ ಮತ ಬೇಟೆಗೆ ಇಳಿದಿದ್ದಾರೆ.
ವಿಧಾನಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ಆಡಳಿತರೂಢ ಬಿಜೆಪಿ ಆ್ಯಕ್ಟಿವ್ ಆಗತೊಡಗಿದೆ. ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿ ಕಲ್ಯಾಣ ಕರ್ನಾಟಕ ಪ್ರವಾಸ ಕೈಗೊಂಡ ಬೆನ್ನಲ್ಲೇ ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಕಲಬುರಗಿ ಜಿಲ್ಲೆಗೆ ಆಗಮಿಸಿದ್ದಾರೆ. ಇಂದು ಅಫಜಲಪುರ ತಾಲೂಕಿನ ದೇವಲ ಗಾಣಗಪುರದ ಪವಿತ್ರ ಸಂಗಮಕ್ಕೆ ಭೇಟಿ ನೀಡಿ ದರ್ಶನ ಪಡೆದ ನಂತರ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ, ದತ್ತನ ನಿರ್ಗುಣ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಾನು ಗಂಗಾತಾಯಿ ಮಗ, ನಿಮ್ಮ ಸಹೋದರ:ಸಿಎಂ ಬಸವರಾಜ ಬೊಮ್ಮಾಯಿಕೋಲಿ ಸಮಾಜದ ನೇತಾರ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ದಿವಂಗತ ವಿಠಲ್ ಹೇರೂರ್ ಅವರ ಆರು ಅಡಿ ಎತ್ತರದ ಕಂಚಿನ ಮೂರ್ತಿ ಅನಾವರಣ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ಕೋಲಿ ಸಮಾಜವನ್ನು ಹೊಗಳಿ ಕೊಂಡಾಡಿದರು. ಕೋಲಿ ಗಂಗಾಮತ ಒಂದು ಬಾರಿ ವಿಶ್ವಾಸ ಕೊಟ್ಟರೆ ದಡ ಮುಟ್ಟಿಸುವರೆಗೆ ಬಿಡದಿರುವ ಸಮಾಜ ಇದು. ನಾನು ನಿಮ್ಮಲ್ಲಿ ಒಬ್ಬವ, ನಾನು ಗಂಗಾತಾಯಿ ಮಗನೇ ನಿಮ್ಮ ಸಹೋದರ ಎಂದು ಹೇಳಿದರು. ದಿ. ವಿಠಲ್ ಹೇರೂರ್ ಜೊತೆ ನಾನು ಪರಿಷತ್ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ನನ್ನನ್ನ ಬಹಳ ಪ್ರೀತಿಯಿಂದ ಕಾಣ್ತಿದ್ದರು. ಅವರ ಆಸೆಯಂತೆ ಕೋಲಿ ಸಮಾಜವನ್ನು ಎಸ್ಟಿ ಮಾಡುವುದರ ಬಗ್ಗೆ ಕುಲಶಾಸ್ತ್ರಿಯ ಅಧ್ಯಯನ ಮಾಡಲಾಗುತ್ತಿದೆ. ಅದರ ವರದಿ ಬಂದ ನಂತರ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡಲಾಗುವುದೆಂದು ಸಿಎಂ ಭರವಸೆ ನೀಡಿದರು.
ಕೋಲಿ ಯುವ ಸಮೂಹ ಅಭಿವೃದ್ಧಿಗೆ ಬದ್ಧ:ಈಗಾಗಲೇ ಕೇಂದ್ರ ಸರ್ಕಾರಕ್ಕೆ ಎಸ್ಟಿ ಸೇರ್ಪಡೆ ವರದಿ ಕಳಿಸಲಾಗಿದೆ. ಅಲ್ಲದೆ ರಾಜ್ಯ ಸರ್ಕಾರ ಕೋಲಿ ಸಮಾಜದ ಯುವಕ ಯುವತಿಯರ ಬದ್ಧತೆಗೆ ಕೆಲಸ ಮಾಡುತ್ತಿದ್ದು, ಶಿಕ್ಷಣ ಉದ್ಯೋಗ, ಎಂಪವರ್ಮೆಂಟ್ ಕೊಡುವ ಕೆಲಸ ಮಾಡುತ್ತಿದೆ. ತಳವಾರ, ಪರಿವಾರ ಸಮಾಜಕ್ಕೆ ಎಸ್ಟಿ ಸಿಕ್ಕ ಹಾಗೇ, ನಿಮ್ಮ ಉಳಿದ ಸಮುದಾಯವನ್ನೂ ಕೂಡ ಎಸ್ಟಿ ವಿಭಾಗಕ್ಕೆ ಸೇರಿಸಲಾಗುದೆಂದು ಸಿಎಂ ಭರವಸೆ ನೀಡಿದರು.