ಕಲಬುರಗಿ:ಮನೆ ಕಟ್ಟಲು ತವರಿನಿಂದ ಹಣ ತರುವಂತೆ ಪೀಡಿಸುತ್ತಿದ್ದ ಪತಿ ಹಾಗೂ ಆತನ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ಸರ್ಕಾರಿ ಆಸ್ಪತ್ರೆ ಸ್ಟಾಫ್ ನರ್ಸ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಶಿವಾಜಿ ನಗರದಲ್ಲಿ ನಡೆದಿದೆ.
ಇಂದಿರಾ ಸಂಜೀವರೆಡ್ಡಿ (38) ಆತ್ಮಹತ್ಯೆ ಮಾಡಿಕೊಂಡ ನರ್ಸ್. ಸೇಡಂ ಆಯುಷ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮೂಲತಃ ರಾಯಚೂರು ಜಿಲ್ಲೆಯ ಇಂದಿರಾ 2002ರಲ್ಲಿ ಸಿವಿಲ್ ಗುತ್ತಿಗೆದಾರ ಸಂಜೀವರೆಡ್ಡಿ ಎಂಬುವರನ್ನು ವರಿಸಿದ್ದರು. ದಂಪತಿಗೆ ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.
ಪತಿ ಹಾಗೂ ಆತನ ಕುಟುಂಬಸ್ಥರು ಮನೆ ಮೇಲಿನ ಮಹಡಿ ಕಟ್ಟಲು ತವರಿನಿಂದ ಹಣ ತರುವಂತೆ ಇಂದಿರಾ ಅವರನ್ನು ಪೀಡಿಸುತ್ತಿದ್ದರಂತೆ. ಇದೇ ವಿಷಯವಾಗಿ ಹಲವು ಬಾರಿ ಜಗಳ ಕೂಡ ಆಗಿತ್ತು. ಕಿರುಕುಳದಿಂದ ಬೇಸತ್ತಿದ್ದ ಇಂದಿರಾ ಬುಧವಾರ ರಾತ್ರಿ ತಮ್ಮ ಮನೆಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.
ಪತಿ ಸಂಜೀವರೆಡ್ಡಿ, ಆತನ ತಾಯಿ ಶಾಂತಾಬಾಯಿ, ತಮ್ಮ ಪರ್ವತ ರೆಡ್ಡಿ ಮತ್ತು ತಮ್ಮನ ಪತ್ನಿ ಮೇಲೆ ಇಂದಿರಾ ತಾಯಿ ದೂರು ನೀಡಿದ್ದಾರೆ. ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.