ಸೇಡಂ(ಕಲಬುರಗಿ):ಕೊರೊನಾದಿಂದ ತವರು ಸೇರಿರುವ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅತ್ತ ಕೊರೊನಾಗೆ ಹೆದರಬೇಕೋ? ಅಥವಾ ಅಧಿಕಾರಿಗಳಿಗೆ ಹೆದರಬೇಕೋ? ಎಂಬ ಡೋಲಾಯಮಾನದ ಸ್ಥಿತಿಯಲ್ಲಿದ್ದಾರೆ ಕ್ವಾರಂಟೈನ್ನಲ್ಲಿರುವ ಜನ.
ತಾಲೂಕಿನಾದ್ಯಂತ 53 ಕ್ವಾರಂಟೈನ್ ಕೇಂದ್ರಗಳಲ್ಲಿ 1,523 ಜನರನ್ನು ಇರಿಸಲಾಗಿದೆ. ಆದರೆ ಬಹುತೇಕ ಕೇಂದ್ರಗಳಲ್ಲಿ ಶೌಚಾಲಯಗಳ ಕೊರತೆ ಇದೆ. ಹೆಚ್ಚಿನ ಜನರನ್ನು ಕ್ವಾರಂಟೈನ್ ಮಾಡಿರುವ ಮುಧೋಳ, ಮೋತಕಪಲ್ಲಿ, ಕೋಡ್ಲಾ, ದುಗನೂರು ಸೆರಿದಂತೆ ಕೆಲವು ಕಡೆ ಸೂಕ್ತ ಶೌಚಾಲಯಗಳಿಲ್ಲದೆ ಜನರು ಅಕ್ಕಪಕ್ಕದ ಜಮೀನುಗಳನ್ನೇ ಅವಲಂಬಿಸಿದ್ದಾರೆ.
ಬಾಟಲಿಯಲ್ಲಿಯೇ ಮೂತ್ರ ಮಾಡಬೇಕಾದ ಹೀನಾಯ ಸ್ಥಿತಿಯಲ್ಲಿ ಸೇಡಂನ ಕ್ವಾರಂಟೈನ್ ಕೇಂದ್ರ ಹಗಲಲ್ಲೇ ಬಯಲಿಗೆ ಹೋಗಲಾಗದವರು ಬಾಟಲಿಗಳಲ್ಲಿ ಮೂತ್ರ ಮಾಡಿ ಬಿಸಾಡುವಂತಹ ಹೀನಾಯ ಸ್ಥಿತಿಗೆ ಬಂದಿದ್ದಾರೆ. ಇಷ್ಟಾದರೂ ಸಹ ತಾಲೂಕು ಆಡಳಿತ ಜಾಣಕುರುಡುತನ ಪ್ರದರ್ಶಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಮೋತಕಪಲ್ಲಿಯಲ್ಲಿರುವ ಕೇಂದ್ರಗಳ ಪೈಕಿ ಒಂದರಲ್ಲಿ ಶೌಚಾಲಯವಿದ್ದು, ಅದು ಬಳಕೆಗೆ ಯೋಗ್ಯವಿಲ್ಲ. ಇನ್ನೊಂದರಲ್ಲಿ ಹತ್ತಾರು ಜನರಿಗೆ ಎರಡೇ ಶೌಚಗೃಹಗಳಿವೆ. ಕೋಣೆಗಳಲ್ಲಿ ಫ್ಯಾನ್ ವ್ಯವಸ್ಥೆ ಇಲ್ಲದ ಪರಿಣಾಮ ಮಹಿಳೆಯರು ರಾತ್ರಿ ಹೊರಾಂಗಣದಲ್ಲೇ ನಿದ್ರಿಸುವಂತಾಗಿದೆ. 100ಕ್ಕೂ ಅಧಿಕ ಜನರಿರುವ ಮುಧೋಳ ಗ್ರಾಮದ 6 ಕೇಂದ್ರಗಳ ಪೈಕಿ ಮೂರರಲ್ಲಿ ಶೌಚಾಲಯಗಳಿಲ್ಲ. ಇರುವ ಹೊಸ ಶೌಚಾಲಯಗಳನ್ನು ಲಾಕ್ ಮಾಡಲಾಗಿದೆ. ಜೊತೆಗೆ ಸಂಜೆಯಾದರೆ ಗ್ರಾಮದ ನೂರಾರು ಜನ ಕ್ವಾರಂಟೈನ್ನಲ್ಲಿರುವವರನ್ನು ಭೇಟಿಯಾಗಿ, ಆಹಾರ ತಂದು ಕೊಡುತ್ತಿದ್ದಾರೆ. ಬಹುತೇಕರು ಮುಂಬೈ, ಪುಣೆಯಿಂದ ಬಂದವರಿದ್ದಾರೆ.
ಇನ್ನು ಬಹುತೇಕ ಕೇಂದ್ರಗಳಿಗೆ ದಿನನಿತ್ಯ ಹೊರಗಿನವರು ಬಂದು ಭೇಟಿ ನೀಡುವುದು ಸಾಮಾನ್ಯ ಎನ್ನುವಂತಾಗಿದೆ. ಯಾವೆಲ್ಲಾ ಕೇಂದ್ರಗಳಲ್ಲಿ ಶೌಚಾಲಯಗಳಿಲ್ಲವೊ ಅಲ್ಲಿ ಶೌಚಾಲಯ ಮತ್ತು ದುರಸ್ತಿ ಕಾರ್ಯ ಕೈಗೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಜನರಿಗೆ ಸಮಸ್ಯೆಯಾಗದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ತಿಳಿಸಿದ್ದಾರೆ.