ಕಲಬುರಗಿ:ಭೀಮಾ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋದ ರೈತನ ಬಸಣ್ಣನ ಶವ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಹಾರಾಷ್ಟ್ರದ ಕುಂಭದ್ರೋಣ ಮಳೆಗೆ ಕಲಬುರಗಿಯಲ್ಲಿ ಮೊದಲ ಬಲಿ! - ಮಳೆಗೆ ಕಲಬುರಗಿಯಲ್ಲಿ ಮೊದಲನೆ ಬಲಿ
ಕಲಬುರಗಿಯ ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮದಲ್ಲಿ ಭಾನುವಾರ ಸಾಯಂಕಾಲ ಜಾನುವಾರುಗಳಿಗೆ ನೀರು ಕುಡಿಸಲು ಹೋದ ಗ್ರಾಮದ ಬಸಣ್ಣ ದೊಡ್ಡಮನಿ ಭೀಮಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು. ಇಂದು ಎನ್.ಡಿ.ಆರ್.ಎಫ್. ತಂಡ ಸತತ ಶೋಧ ನಡೆಸಿತಾದರೂ ಬಸಣ್ಣನನ್ನು ಜೀವಂತವಾಗಿ ಕರೆತರುವಲ್ಲಿ ವಿಫಲವಾಗಿದ್ದು, ಶವ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು.
ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮದಲ್ಲಿ ನಿನ್ನೆ ಸಾಯಂಕಾಲ ಜಾನುವಾರುಗಳಿಗೆ ನೀರು ಕುಡಿಸಲು ಹೋದಾಗ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ಕೋಳಕೂರ ಗ್ರಾಮದ ಬಸಣ್ಣ ದೊಡ್ಡಮನಿ (55) ಭೀಮಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು. ಎನ್ಡಿಆರ್ಎಫ್ ತಂಡ ನಿನ್ನೆ ತಡರಾತ್ರಿವರೆಗೂ ಶೋಧಕಾರ್ಯ ಮಾಡಿದರೂ ಕತ್ತಲಾದ ಕಾರಣ ಪತ್ತೆಯಾಗಿರಲಿಲ್ಲ, ಹೀಗಾಗಿ ಇಂದು ಬೆಳಗ್ಗೆ ಮತ್ತೆ ಶೋಧ ಕಾರ್ಯ ಆರಂಭಿಸಿದಾಗ ಅಂದಾಜು ಒಂದು ಕಿಲೋ ಮೀಟರ್ ಅಂತರದಲ್ಲಿ ಮುಳ್ಳಿನ ಕಂಟಿಯಲ್ಲಿ ಬಸಣ್ಣ ಶವವಾಗಿ ಪತ್ತೆಯಾಗಿದ್ದಾರೆ. ರೈತ ಬಸಣ್ಣನ ಅವರ ಮೃತದೇಹ ಹೊರತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದರೊಂದಿಗೆ ಮಹಾರಾಷ್ಟ್ರದಲ್ಲಿ ಉಂಟಾದ ಮಳೆಗೆ ಜಿಲ್ಲೆಯಲ್ಲಿ ಮೊದಲನೆ ಬಲಿಯಾಗಿದ್ದಾರೆ ಬಸಣ್ಣ. ಈ ಘಟನೆ ನಂತರ ನಿನ್ನೆಯಿಂದ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ ಸ್ಥಳೀಯ ಮುಖಂಡ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಎನ್ಡಿಆರ್ಎಫ್ ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.