ಕಲಬುರಗಿ:ಚಿಂಚೋಳಿ ಕ್ಷೇತ್ರದಲ್ಲಿ ಉಪ ಚುನಾವಣೆಯ ಪ್ರಚಾರದ ಭರಾಟೆ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಚಿಂಚೋಳಿ ಕ್ಷೇತ್ರದಲ್ಲಿಂದು ಕಾಂಗ್ರೆಸ್ ಅಭ್ಯರ್ಥಿ ಪರ ಸಿಎಂ ಮತಬೇಟೆ - chincholi by election
ಚಿಂಚೋಳಿ ವಿಧಾನಸಭಾ ಉಪ ಚುನಾವಣಾ ಅಖಾಡ ರಂಗೇರಿದೆ. ರಾಜ್ಯದ ಸಮ್ಮಿಶ್ರ ಸರ್ಕಾರ ಉಳಿಯಬೇಕಾದರೆ ಚಿಂಚೋಳಿ ಮತ್ತು ಕುಂದಗೋಳ ಉಪ ಚುನಾವಣೆಗಳನ್ನು ಗೆಲ್ಲಲೇಬೇಕು ಎಂಬ ಹಠದಲ್ಲಿರುವ ದೋಸ್ತಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇಂದು ಸಿಎಂ ಕುಮಾರಸ್ವಾಮಿ ಕೈ ಅಭ್ಯರ್ಥಿ ರಾಥೋಡ್ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ.
ಸಂಗ್ರಹ ಚಿತ್ರ
ಚಿಂಚೋಳಿ ಉಪ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲಿರುವ ಸಿಎಂ, ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಪರ ಮತಯಾಚನೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಹುಬ್ಬಳ್ಳಿಯಿಂದ ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಅವರು ಆಮಿಸಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಸಂಜೆ 5 ಗಂಟೆಯಿಂದ ಕೈ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ 9 ಗಂಟೆಗೆ ಬೀದರ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳಸಲಿರುವ ಸಿಎಂ, ಪ್ರಚಾರ ಸಭೆಗೂ ಮುನ್ನ ಅಫ್ಜಲ್ಪುರ ತಾಲೂಕಿನ ಗಾಣಗಾಪುರ ದತ್ತಾತ್ರೇಯ ದೇವರ ದರ್ಶನ ಪಡೆಯಲಿದ್ದಾರೆ.