ಕರ್ನಾಟಕ

karnataka

ETV Bharat / state

ಕುಮಾರಸ್ವಾಮಿ ಹೇಳಿಕೆಯಿಂದ ಮುಸ್ಲಿಂ ಸಮಾಜಕ್ಕೆ ನೋವಾಗಿದೆ: ಜೆಡಿಎಸ್ ಮುಖಂಡ ನಾಸಿರ್ ಹುಸೇನ್ - ಜಾತ್ಯಾತೀತ ಮನೋಭಾವನೆ

ಕಲಬುರಗಿಯಲ್ಲಿಂದು ಕಲ್ಯಾಣ​ ಕರ್ನಾಟಕದ ಮುಸ್ಲಿಂ ಮುಖಂಡರ ಸಭೆ ಕರೆದಿದ್ದೇವೆ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ, ಬೆಂಗಳೂರಿನಲ್ಲಿಯೂ ಸಭೆ ನಡೆಸುತ್ತೇವೆ. ಈ ಮೂಲಕ ಮುಂದಿನ ನಡೆಯ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಜೆಡಿಎಸ್ ಮುಖಂಡ ನಾಸಿರ್ ಹುಸೇನ್ ಉಸ್ತಾದ್ ತಿಳಿಸಿದರು.

JDS leader Nasir Hussain Ustad spoke to the media.
ಜೆಡಿಎಸ್ ಮುಖಂಡ ನಾಸಿರ್ ಹುಸೇನ್ ಉಸ್ತಾದ್ ಮಾಧ್ಯಮದವರ ಜೊತೆ ಮಾತನಾಡಿದರು.

By ETV Bharat Karnataka Team

Published : Oct 1, 2023, 4:44 PM IST

ಕಲಬುರಗಿ: ಮುಸ್ಲಿಂ ಮತಗಳನ್ನು ನಂಬಿ ನಾನು ರಾಜಕೀಯ ಮಾಡಿಲ್ಲ ಎಂಬ‌ ಮಾಜಿ‌ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಕಲಬುರಗಿಯಲ್ಲಿಂದು ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ನಾಸಿರ್ ಹುಸೇನ್ ಉಸ್ತಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಸಮಾಜವನ್ನು ನಂಬಿ ರಾಜಕಾರಣ ಮಾಡುವ ಪಕ್ಷಗಳಿದ್ರೆ ಅದು ಯೋಗ್ಯವಲ್ಲ. ರಾಷ್ಟ್ರದಲ್ಲಿ ಯಾವುದೇ ಪಕ್ಷ ನಡೆಯಬೇಕಾದ್ರೆ ಎಲ್ಲಾ ಸಮುದಾಯದ ಮತಗಳು ಬೇಕೇ ಬೇಕು. ಅಲ್ಪಸಂಖ್ಯಾತ ಮುಸ್ಲಿಂ ಮತಗಳಿದ್ದರೆ ಮಾತ್ರ ರಾಜಕೀಯ ಪಕ್ಷಗಳು ಉಳಿಯಲು ಸಾಧ್ಯ ಎಂದರು.‌

ಕುಮಾರಸ್ವಾಮಿ ಹೇಳಿಕೆ ಮುಸ್ಲಿಂ ಸಮಾಜಕ್ಕೆ ನೋವು ತಂದಿದೆ. ಆರ್‌ಎಸ್‌ಎಸ್, ಬಿಜೆಪಿ ನಾಯಕರನ್ನು ಮೆಚ್ಚಿಸಲು ಇಂತಹ ಹೇಳಿಕೆ ನೀಡಿದ್ದಾರೆ. ಸದ್ಯ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಅಲ್ಪಸಂಖ್ಯಾತರು ನೊಂದಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಜಾತ್ಯತೀತ ಮನೋಭಾವನೆಯಿಂದ ಜೆಡಿಎಸ್ ಪಕ್ಷದಲ್ಲಿ ನಾವಿದ್ದೇವೆ ಎಂದು ಹೇಳಿದರು.

ಏಕಾಏಕಿ ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ಜೆಡಿಎಸ್ ಕೈಜೋಡಿಸಿರುವುದು ಬೇಸರ ತರಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಕಲಬುರಗಿಯಲ್ಲಿ ಹೈದ್ರಾಬಾದ್-ಕರ್ನಾಟಕದ ಮುಸ್ಲಿಂ ಮುಖಂಡರ ಸಭೆ ಕರೆಯಲಾಗಿದೆ. ರಾಜ್ಯ ಮುಖಂಡ, ಮಾಜಿ ಸಚಿವ ಎಂ.ಎನ್.ನಬಿ ಮುಂದಾಳತ್ವದಲ್ಲಿ ಸಭೆ ನಡೆಸಿ ನಮ್ಮ ಮುಂದಿನ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ.‌ ಇದಲ್ಲದೇ ಹುಬ್ಬಳ್ಳಿ, ಬೆಂಗಳೂರಿನಲ್ಲಿಯೂ ಸಭೆ ನಡೆಸಿ ಪಕ್ಷದ ಜೊತೆ ಮುಂದುವರೆಯುವುದೇ ಅಥವಾ ಹೊರ ಹೋಗುವುದೇ ಎಂಬ ತೀರ್ಮಾನ ಮಾಡ್ತೇವೆ. ಇಂತಹ ಮೈತ್ರಿಯನ್ನು ನಾವ್ಯಾರೂ ಊಹಿಸಿಕೊಂಡಿರಲಿಲ್ಲ ಎಂದು ತಿಳಿಸಿದರು.

ಈ ಹಿಂದೆ ಕುಮಾರಸ್ವಾಮಿ ಬಿಜೆಪಿಯ ನಿಲುವನ್ನು ಗಟ್ಟಿಯಾಗಿ ಖಂಡಿಸಿದವರು. ಹಿಜಾಬ್, ಹಲಾಲ್ ಕಟ್ ಸೇರಿದಂತೆ ಎಲ್ಲಾ ಸಂದರ್ಭದಲ್ಲೂ ಬಿಜೆಪಿಯನ್ನು ವಿರೋಧಿಸಿದ್ದರು. ಇಂತಹ ಓರ್ವ ನಾಯಕ ಈಗ ಚುನಾವಣೆ ಗುರಿಯಾಗಿಸಿಕೊಂಡು ಮೈತ್ರಿ ನಿರ್ಣಯ ಕೈಗೊಂಡಿರುವುದು ಸಮಂಜಸವಲ್ಲ ಎಂದು ಹೇಳಿದರು.

ಬಿಜೆಪಿಯವರು ಮುಸ್ಲಿಂ ಸಮುದಾಯದ ಬಗ್ಗೆ ಯಾವ ನಿಲುವು ಹೊಂದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹತ್ತು ವರ್ಷದ ಬಿಜೆಪಿ ಆಡಳಿತದಲ್ಲಿ ಸಮಾಜ‌ ಒಡೆದಾಳುವ ನೀತಿ ಅನುಸರಿಸಿದ್ದಾರೆ. ಇಂತಹವರೊಂದಿಗೆ ಜಾತ್ಯತೀತ ತತ್ವ ಹೊಂದಿದವರು ಮೈತ್ರಿ ಮಾಡಿಕೊಂಡಿರುವುದು ನೋವಾಗುತ್ತಿದೆ. ನಮ್ಮ ನಾಯಕರ ಮೇಲೆ ನಂಬಿಕೆ ಇಟ್ಟುಕೊಂಡು ಸೈದ್ಧಾಂತಿಕ ನಿಲುವು ಹೊಂದಿದ್ದೇವೆ. ಬೆಂಗಳೂರಿನಲ್ಲಿ ಅಲ್ಪಸಂಖ್ಯಾತರ ಮುಖಂಡರ ಸಭೆಯ ನಂತರ ಅಂತಿಮ ನಿರ್ಧಾರಕ್ಕೆ ಬರಲಿದ್ದೇವೆ ಎಂದು ನಾಸೀರ್ ಹುಸೇನ್ ತಿಳಿಸಿದರು.

ಇದನ್ನೂಓದಿ:ಸಿಎಂ ಸ್ಥಾನದ ಬಯಕೆ ಹೊಂದಿದ್ದ ಹೆಚ್.ಡಿ.ಕುಮಾರಸ್ವಾಮಿ ಹತಾಶರಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details