ಕಲಬುರಗಿ:ಇತ್ತೀಚೆಗಷ್ಟೇ ರಾಜ್ಯದಲ್ಲಿ ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣ ರಾಜ್ಯವಲ್ಲದೇ ರಾಷ್ಟ್ರಮಟ್ಟದಲ್ಲೂ ದೊಡ್ಡಮಟ್ಟದ ಸದ್ದು ಮಾಡಿತ್ತು. ಈ ಪ್ರಕರಣ ಇನ್ನೂ ತನಿಖಾ ಹಂತದಲ್ಲಿರುವಾಗಲೇ ಇದೀಗ ಕೆಪಿಟಿಸಿಎಲ್ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಕಳೆದ ಎರಡು ದಿನಗಳ ಹಿಂದೆ ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ ನಡೆದಿದ್ದ ಕೆಪಿಟಿಸಿಎಲ್ ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಶಂಕಿಸಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ಕಿಂಗ್‌ಪಿನ್ ತಂಡ ಚಿಂಚೋಳಿಯ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಡಿವೈಸ್ ಮೂಲಕ ಅಭ್ಯರ್ಥಿಗಳಿಗೆ ಕೀ ಆನ್ಸರ್ ರವಾನಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಸಿಐಡಿ ಮಾಹಿತಿ ಮೇರೆಗೆ ಅಲರ್ಟ್ ಆದ ಡಿಸಿ ಮತ್ತು ಎಸ್ಪಿ ಜಿಲ್ಲೆಯ ಎಲ್ಲಾ 47 ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಕಿಂಗ್ ಪಿನ್ ತಂಡ ಜೇವರ್ಗಿ ಪಟ್ಟಣದ ಬಳಿ ಮೊಬೈಲ್ ಸ್ವೀಚ್ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಮಾದರಿಯಲ್ಲೇ ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ಅಕ್ರಮ ಎಸಗಲು ಗೋಕಾಕ್ ಕಿಂಗ್‌ಪಿನ್ ತಂಡ ಕಲಬುರಗಿಯಲ್ಲಿ ಆ್ಯಕ್ಟಿವ್ ಆಗಿತ್ತೆಂಬ ಸಂಶಯ ವ್ಯಕ್ತವಾಗಿದೆ. ಇಡೀ ಅಕ್ರಮದ ಹಿಂದೆ ಕಲಬುರಗಿ ಅಥವಾ ರಾಯಚೂರು ಮೂಲದ ಸರ್ಕಾರಿ ನೌಕರನೋರ್ವ ಇದರಲ್ಲಿ ಭಾಗಿಯಾಗಿರುವ ಬಗ್ಗೆ ಅನುಮಾನ ಮೂಡಿದ್ದು, ಇದರ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:ಇಎಸ್ಐಸಿ ಆಸ್ಪತ್ರೆಯಲ್ಲಿ ಹಣ ದುರುಪಯೋಗ: ಬೆಂಗಳೂರು, ಹುಬ್ಬಳ್ಳಿಯಲ್ಲಿ ಸಿಬಿಐ ದಾಳಿ