ಕಲಬುರಗಿ:ಕಲಬುರಗಿಗೆ ಮಂಜೂರಾಗಿದ್ದ ರೈಲ್ವೆ ವಿಭಾಗಿಯ ಕಚೇರಿಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿದ್ದು, ಕಲಬುರಗಿ ಜನರಲ್ಲಿ ಮತ್ತೆ ನಿರಾಸೆ ಉಂಟುಮಾಡಿದೆ.
2014ರಲ್ಲಿ ಯುಪಿಎ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಮನಮೋಹನಸಿಂಗ್ ಸಂಪುಟದ ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಘೋಷಿಸಿದ್ದ ಕಲಬುರಗಿ ವಿಭಾಗಿಯ ಕಚೇರಿಯನ್ನು ಹಿಂದಕ್ಕೆ ಪಡೆಯಲಾಗಿದೆ.
ಕಲಬುರಗಿ ಸಂಸದ ಉಮೇಶ ಜಾಧವ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಪಿಯೂಷ್ ಗೋಯಲ್, ರೈಲ್ವೆ ಅಧಿಕಾರಿಗಳ ತಂಡವು ವಿಭಾಗೀಯ ಕಚೇರಿ ಆರಂಭಿಸುವ ಕುರಿತು ಪರಿಶೀಲನೆ ನಡೆಸಿದೆ. ಕಾರ್ಯಾಚರಣೆ, ಹಣಕಾಸು, ಆಡಳಿತಾತ್ಮಕ ಸೇರಿದಂತೆ ಇತರೆ ಅಂಶಗಳನ್ನು ಗಮನದಲಿಟ್ಟುಕೊಂಡು ಪ್ರಸ್ತಾವನೆಯನ್ನು ಕೈ ಬಿಡಲು ವರದಿ ಸಲ್ಲಿಸಲಾಗಿದೆ. ವರದಿಯನ್ನು ಪ್ರಾಧಿಕಾರವು ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.
ಇದು ಕಲಬುರಗಿ ಜನರಿಗೆ ಮತ್ತೆ ನಿರಾಸೆ ಉಂಟುಮಾಡಿದ್ದು, ಕೇಂದ್ರ ಸರ್ಕಾರ ಮತ್ತು ಸಂಸದ ಉಮೇಶ್ ಜಾಧವ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.