ಕರ್ನಾಟಕ

karnataka

ETV Bharat / state

ಕೆಕೆಆರ್​ಟಿಸಿಯಿಂದ 'ಕಲ್ಯಾಣ ರಥ' ಹೈಟೆಕ್ ಸ್ಲೀಪರ್ ಬಸ್ ಸೇವೆ: ಆಗಸ್ಟ್ 28ರಂದು ಚಾಲನೆ

KKRTC Multi Axle Sleeper Bus: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹೊಸದಾಗಿ ಐಷಾರಾಮಿ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ ಸೇವೆ ಆರಂಭವಾಗಲಿದೆ.

new-hi-tech-volvo-multi-axle-sleeper-bus-service-from-kkrtc
ಕೆಕೆಆರ್​ಟಿಸಿಯಿಂದ 'ಕಲ್ಯಾಣ ರಥ' ಹೈಟೆಕ್ ಸ್ಲೀಪರ್ ಬಸ್.. ಆಗಸ್ಟ್ 28ರಂದು ಚಾಲನೆ

By ETV Bharat Karnataka Team

Published : Aug 27, 2023, 8:20 AM IST

ಕಲಬುರಗಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (ಕೆಕೆಆರ್‌ಟಿಸಿ) ಹೊಸದಾಗಿ ಹೈಟೆಕ್ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ ಸೇರ್ಪಡೆಯಾಗಿದೆ. 'ಕಲ್ಯಾಣ ರಥ' ಎಂಬ ಹೆಸರಿನ ಈ ಐಷಾರಾಮಿ ಬಸ್ ಇದೇ ಆಗಸ್ಟ್ 28 ರಿಂದ ರಸ್ತೆಗೆ ಇಳಿಯಲಿದೆ. ಮೊದಲ ಹಂತದಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು-ಬೆಂಗಳೂರು ನಡುವೆ ಸಂಚಾರ ನಡೆಸಲಿದೆ.‌

ಕಲ್ಯಾಣ ರಥ

''ಆಗಸ್ಟ್ 28 ರಂದು ಸಿಂಧನೂರಿನಲ್ಲಿ ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಅವರು ನೂತನ ಬಸ್​​ಗೆ ಚಾಲನೆ ನೀಡಲಿದ್ದಾರೆ. ಸಂಸ್ಥೆಗೆ ಕಲ್ಯಾಣ ರಥ ಬ್ರ್ಯಾಂಡಿನ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ ಹೊಸದಾಗಿ ಸೇರ್ಪಡೆಯಾಗಿದ್ದು, ರೈಲು ಸೇವೆ ಇಲ್ಲದ ಸಿಂಧನೂರಿನಿಂದ ಆರಂಭಿಕವಾಗಿ ರಸ್ತೆಗಿಳಿಸಲಾಗುತ್ತಿದೆ. ತದನಂತರ ಪ್ರದೇಶದ ಇತರೆ ಭಾಗಕ್ಕೂ ಈ ಸೇವೆ ವಿಸ್ತರಣೆಯಾಗಲಿದೆ'' ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ತಿಳಿಸಿದ್ದಾರೆ.

ಸಿಂಧನೂರು - ಬೆಂಗಳೂರು ನಡುವಿನ ಈ ಐಷಾರಾಮಿ ಬಸ್ ಪ್ರತಿದಿನ ಸಿಂಧನೂರಿನಿಂದ ರಾತ್ರಿ 10 ಗಂಟೆಗೆ ಹೊರಟು ಕಾರಟಗಿ - ಗಂಗಾವತಿ - ಬೂದುಗುಂಪ ಕ್ರಾಸ್ - ಹೊಸಪೇಟೆ - ಕೂಡ್ಲಿಗಿ - ಹಿರಿಯೂರು - ತುಮಕೂರು ಮಾರ್ಗವಾಗಿ ಮರುದಿನ ಬೆಂಗಳೂರಿಗೆ ಬೆಳಗ್ಗೆ 5:30 ಗಂಟೆಗೆ ತಲುಪಲಿದೆ. ಇದೇ ಮಾರ್ಗದಲ್ಲಿ ಬೆಂಗಳೂರಿನಿಂದ ರಾತ್ರಿ 10:15 ಗಂಟೆಗೆ ಹೊರಟು ನಂತರದ ದಿನ ಬೆಳಗ್ಗೆ 5:45 ಗಂಟೆಗೆ ಸಿಂಧನೂರು ತಲುಪಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಲ್ಯಾಣ ರಥ

ಕಲ್ಯಾಣ ರಥದ ವಿಶೇಷತೆ:ಕಲ್ಯಾಣ ರಥ ಬ್ರ್ಯಾಂಡಿನ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಕ್ಲಾಸ್ 40 ಆಸನಗಳ ಐಷಾರಾಮಿ ಬಸ್ ಆಗಿದೆ. 350 ಬಿ.ಎಸ್-6 ಎಂಜಿನ್ ಹೊಂದಿದ್ದು, ವಿಶಿಷ್ಟ ಸಸ್ಪೆನ್ಶನ್‍ಗಳನ್ನು ಅಳವಡಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿದ್ದು, ಸ್ವಯಂಚಾಲಿತ ಬಾಗಿಲು ತೆರೆಯುವ ವ್ಯವಸ್ಥೆ, ಬೆಂಕಿ ನಂದಿಸುವ ಉಪಕರಣಗಳ ವ್ಯವಸ್ಥೆ, ವಾಹನದ ಟ್ರ್ಯಾಕಿಂಗ್ ಗುರುತು ವ್ಯವಸ್ಥೆ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬೆಡ್ ಲೈಟ್, ಲ್ಯಾಪ್ ಟಾಪ್ ಬ್ಯಾಗ್ ಇಡುವ ವ್ಯವಸ್ಥೆ ಇದೆ. ಒಟ್ಟಾರೆ, ಆರಾಮದಾಯಕ ಮತ್ತು ಸುಖಕರ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಅಧಿಕಾರಿಗಳು.

ಇದನ್ನೂ ಓದಿ: KSRTC: ಕೆಂಪು ಬಣ್ಣದ ಬಸ್​ಗಳಿಗೆ ಹೈಟೆಕ್ ಸ್ಪರ್ಶ.. ಚಿಂತೆ ಬಿಡಿ ಆರಾಮಾಗಿ ಪ್ರಯಾಣಿಸಿ ಎನ್ನುತ್ತಿದೆ ಕೆಎಸ್ಆರ್​ಟಿಸಿ

ವಿಶೇಷ ವಿನ್ಯಾಸದ ಕೆಎಸ್​ಆರ್​ಟಿಸಿ ಬಸ್​:ದೇಶದಲ್ಲಿ ಮೊದಲಿನಿಂದಲೂ ಜನಸ್ನೇಹಿ​ ಸೇವೆಗೆ ಹೆಸರುವಾಸಿಯಾಗಿರುವ ಕೆಎಸ್​ಆರ್​ಟಿಸಿಯು ಇನ್ನೊಂದೆಡೆ ಸಾಮಾನ್ಯ ಸಾರಿಗೆ ಬಸ್​ಗಳನ್ನು ಪ್ರೋಟೋಟೈಪ್ ವಾಹನಗಳನ್ನಾಗಿ ವಿನ್ಯಾಸ ಮಾಡುತ್ತಿದೆ. ಇದರಿಂದ ಪ್ರಯಾಣಿಕರಿಗೆ ಸಾಮಾನ್ಯ ಬಸ್​ಗಳಲ್ಲೇ ಐಷಾರಾಮಿ ಪ್ರಯಾಣದ ಅನುಭವ ಸಿಗಲಿದೆ. ಈಗಾಗಲೇ ನೂತನ ಪ್ರೋಟೋ ಟೈಪ್ ವಾಹನದ ಮಾದರಿ ಸಿದ್ಧವಾಗಿದ್ದು, ನವೀನ ವಿನ್ಯಾಸದಲ್ಲಿ ಸಿದ್ಧಗೊಂಡಿದೆ. ಇತ್ತೀಚೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಹನದ​ ಪರಿಶೀಲನೆ ನಡೆಸಿ, ಕೆಲ ಮಾರ್ಪಾಡಿನೊಂದಿಗೆ ಹೊಸ ವಿನ್ಯಾಸದ ಬಸ್​ಗೆ ಒಪ್ಪಿಗೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಈ ಬಸ್​ ಸೇವೆ ಆರಂಭವಾಗಲಿದೆ.

ABOUT THE AUTHOR

...view details