ಕಲಬುರಗಿ:ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕೋಮಾ ಸ್ಥಿತಿಯಲ್ಲಿದ್ದುದು ಸತ್ಯ. ಅದು ಹಿಂದಿನ ಸರ್ಕಾರದಿಂದ ಬಂದ ಬಳುವಳಿ. ಅದನ್ನು ಗುಣಮುಖವನ್ನಾಗಿಸೋ ಕೆಲಸ ಬಿಜೆಪಿ ಸರ್ಕಾರದಿಂದ ನಡೀತಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ತಿರುಗೇಟು ನೀಡಿದ್ದಾರೆ.
ರಾಜ್ಯ ಸರ್ಕಾರ ಐಸಿಯುನಲ್ಲಿದೆ. ಕೆಕೆಆರ್ಡಿಬಿ ಕೋಮಾ ಸ್ಥಿತಿಗೆ ಜಾರಿದೆ ಎಂಬ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕೆಕೆಆರ್ಡಿಬಿ ಕೋಮಾ ಸ್ಥಿತಿಯಲ್ಲಿ ಇರುವುದು ನಿಜ. ಹಿಂದಿನ ಸರ್ಕಾರದಲ್ಲಿ ಕೋಮಾ ಸ್ಥಿತಿಗೆ ಹೋಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ವೆಂಟಿಲೇಟರ್ನಲ್ಲಿರುವ ಕೆಕೆಆರ್ಡಿಬಿಯನ್ನು ಗುಣಮುಖವನ್ನಾಗಿಸೋ ಕೆಲಸ ಶುರು ಮಾಡಿಕೊಂಡಿದ್ದು, ಸದ್ಯ ಕೋಮಾದಿಂದ ಚೇತರಿಸಿಕೊಳ್ತುತ್ತಿದೆ ಎಂದರು.
1,131 ಕೋಟಿ ರೂ. ಅನುಮೋದನೆ:ರಾಜ್ಯ ಸರ್ಕಾರ 1,131 ಕೋಟಿ ರೂ. ಅನುಮೋದನೆ ನೀಡಿದೆ. 955 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆ ರೂಪಿಸಿದ್ದೇವೆ. ಇದರಲ್ಲಿ 540 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಉಳಿದ ಅನುದಾನವನ್ನೂ ರಾಜ್ಯ ಸರ್ಕಾರ ಇಷ್ಟರಲ್ಲೇ ಬಿಡುಗಡೆ ಮಾಡಲಿದೆ. ಯಾವ ಸರ್ಕಾರವೂ ಪೂರ್ಣ ಪ್ರಮಾಣದ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿಯೂ ಸರ್ಕಾರ ಇಷ್ಟು ಬಜೆಟ್ ನೀಡಿದೆ. ಇಷ್ಟಾದರೂ ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸೋ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.