ಕಲಬುರಗಿ:ಸಿಎಂ ಇದ್ದಾಗ್ಯೂ ಮಂತ್ರಿಗಳಿಲ್ಲದೇ ಅಧಿಕಾರಿಗಳ ಮೂಲಕ ಧ್ವಜಾರೋಹಣ ನಡೆಯುತ್ತಿರುವುದು ಇದು ಮೊದಲ ಬಾರಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ರಾಜ್ಯ ಬಿಜೆಪಿ ಸರ್ಕಾರವನ್ನು ಕುಟುಕಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳು ಧ್ವಜಾರೋಹಣ ಮಾಡದೇ ಅಧಿಕಾರಿಗಳಿಗೆ ನೀಡುವಂತಾಗಿರುವುದು ಇದು ಪ್ರಜಾಪ್ರಭುತ್ವಕ್ಕಾದ ದೊಡ್ಡ ಅಪಮಾನ ಎಂದರು. ನೆರೆಹಾವಳಿಯಂತಹ ಸಂದರ್ಭದಲ್ಲಿ ಒಬ್ಬ ಸಿಎಂರಿಂದ ಎಲ್ಲವನ್ನೂ ಗಮನ ಹರಿಸಲು ಸಾಧ್ಯವಿಲ್ಲ, ಮಂತ್ರಿಮಂಡಲ ರಚನೆ ಮಾಡಲು ಅವರಿಗೆ ಏನು ತಾಪತ್ರಯ? ಬಿಜೆಪಿಯವರು ಪ್ರಜಾಪ್ರಭುತ್ವದ ಬಗ್ಗೆ ದೊಡ್ಡದಾಗಿ ಮಾತಾಡುತ್ತಾರೆ. ಸರ್ಕಾರದಲ್ಲಿ ಹೊಂದಾಣಿಕೆ ಇದ್ದಂತಿಲ್ಲವೋ ಅಥವಾ ಬೇರೆಯವರನ್ನು ತೆಗೆದುಕೊಂಡು ಹೋಗಲು ಅವರಿಂದ ಆಗುತ್ತಿಲ್ಲವೋ ಗೊತ್ತಿಲ್ಲ, ಎಂತಹ ಕಠಿಣ ಸಂದರ್ಭದಲ್ಲಿಯೂ ಈ ತರದ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ, ರಾಜ್ಯದಲ್ಲಿ ಈ ಬಾರಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಬಿಜೆಪಿಯೇ ಕಾರಣ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.