ಕಲಬುರಗಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ರಾಷ್ಟ್ರೀಯ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಭಾವಚಿತ್ರ ವಿರೂಪಗೊಳಿಸಿ ವಾಟ್ಸ್ ಆ್ಯಪ್ನಲ್ಲಿ ಸ್ಟೇಟಸ್ ಹಾಕಿದ ಆರೋಪದಲ್ಲಿ ಚಿತ್ತಾಪುರ ಬಿಜೆಪಿ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲಾಗಿದೆ. ಚಿತ್ತಾಪುರ ನಿವಾಸಿ ಅಶ್ವಥ್ ರಾಠೋಡ್ ಎಂಬುವವರ ವಿರುದ್ಧ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸೋಮವಾರ ರಾತ್ರಿ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಅಶ್ವಥ್ ಅವರನ್ನು ಕೂಡಲೇ ಬಂಧಿಸುವಂತೆ ಪೊಲೀಸ್ ಠಾಣೆ ಎದುರು ಪಟ್ಟುಹಿಡಿದು ಕುಳಿತಿದ್ದರು. ಐಪಿಸಿ ಕಲಂ 504 ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಶ್ವಥ್ ಅವರನ್ನು ಬಂಧಿಸಿ ಠಾಣೆಗೆ ಕರೆತಂದು ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಉನ್ನತ ಸ್ಥಾನದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ಫೋಟೋವನ್ನು ವ್ಯಂಗ್ಯವಾಗಿ ವಿರೂಪಗೊಳಿಸಿದ್ದಲ್ಲದೇ 'ಮಲ್ಲಿಕಾರ್ಜುನ ಖರ್ಗೆ ಅವರೇ ನಿಮ್ಮ ಸೋಲಿಗೆ ನಿಮ್ಮ ಸುಪುತ್ರ ಕಾರಣ' ಎಂದು ತಲೆಬರಹ ಬರೆದು ತನ್ನ ವಾಟ್ಸ್ ಆ್ಯಪ್ ಸ್ಟೇಟಸ್ನಲ್ಲಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನು ಗಮನಿಸಿದ ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಮುಕ್ತಾರ ಪಟೇಲ್, ವಿನೋದ ಗುತ್ತೇದಾರ್ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಕೇಸು ದಾಖಲಿಸಿದ್ದಾರೆ.
ಕರ್ನಾಟಕದ ಹಿರಿಯ ಮುತ್ಸದ್ಧಿ ರಾಜಕಾರಣಿ ಎಂದು ಕರೆಸಿಕೊಳ್ಳುವ ರಾಷ್ಟ್ರ ಮಟ್ಟದ ಉನ್ನತ ಹುದ್ದೆಯಲ್ಲಿರುವ ಖರ್ಗೆ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾರೆ. ಅವರನ್ನು ಅನುಸರಿಸುವ ಅಪಾರ ಅನುಯಾಯಿಗಳಿದ್ದಾರೆ. ಬಿಜೆಪಿ ಕಾರ್ಯಕರ್ತನ ಕೃತ್ಯದಿಂದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಅವಮಾನ ಮಾಡಲಾಗಿದೆ ಎಂದು ಭೀಮಣ್ಣಾ ಸಾಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.