ಕಲಬುರಗಿ:ವಾರಪೂರ್ತಿ ದುಡಿಯುವವರು ವೀಕೆಂಡ್ನಲ್ಲಿ ಮೋಜು ಮಸ್ತಿಯೊಂದಿಗೆ ಜಾಲಿಯಾಗಿ ದಿನ ಕಳೆಯಲು ಬಯಸುತ್ತಾರೆ. ಆದರೆ ಕೆಎಎಸ್ ಅಧಿಕಾರಿಯೊಬ್ಬರು ವೀಕೆಂಡ್ ರಜೆ ದಿನ ದನ ಮೇಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸೇಡಂ ಉಪ ವಿಭಾಗದ ಸಹಾಯಕ ಆಯುಕ್ತ ಹಾಗೂ ರಟಕಲ್ ರೇವಣಸಿದ್ದೇಶ್ವರ ಗುಡ್ಡ ದೇವಸ್ಥಾನದ ಆಡಳಿತಾಧಿಕಾರಿ ಆಶಪ್ಪ ಪೂಜಾರಿ ದೇವಸ್ಥಾನಕ್ಕೆ ಸೇರಿದ ಜಾನುವಾರುಗಳನ್ನು ಮೇಯಿಸಿ ವೀಕೆಂಡ್ಅನ್ನು ಅರ್ಥಪೂರ್ಣವಾಗಿ ಕಳೆದಿದ್ದಾರೆ.
ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದ ರೇವಣಸಿದ್ದೇಶ್ವರ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು, ಇಲ್ಲಿನ ಆಡಳಿತಾಧಿಕಾರಿಯಾದ ಆಶಪ್ಪ ಪೂಜಾರಿ ದೇವಸ್ಥಾನದ ಗೋಶಾಲೆಯ 300 ಜಾನುವಾರುಗಳನ್ನು ಬೆಳಗ್ಗೆ ಗುಡ್ಡದಲ್ಲಿ ಬಿಟ್ಟು ಓಡಾಡಿಸಿಕೊಂಡು ಹಸಿರು ಮೇವು ಮೇಯಿಸಿದ್ದಾರೆ. ಶುಕ್ರವಾರ ರಾತ್ರಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿದ್ದ ಅಧಿಕಾರಿ ಆಶಪ್ಪ ಅವರು, ಶನಿವಾರ ಬೆಳಗಿನ ಜಾವ 6 ಗಂಟೆಗೆ ಜಾನುವಾರುಗಳನ್ನು ಹಸಿ ಮೇವು ಮೇಯಿಸಲು ಕರೆದೊಯ್ದಿದ್ದರು.
ರಟಕಲ್ ಗ್ರಾಮದಲ್ಲಿ 326 ಎಕರೆ ಅರಣ್ಯ ಇಲಾಖೆಯ ಗುಡ್ಡಗಾಡು ಪ್ರದೇಶವಿದ್ದು, ಇದೇ ಪ್ರದೇಶದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ 12 ಗಂಟೆವರೆಗೆ 300 ಜಾನುವಾರುಗಳಿಗೆ ಗೋಪಾಲಕರಾಗಿ ಕೆಲಸ ಮಾಡಿ ಮಾದರಿ ಆಗಿದ್ದಾರೆ. ಇನ್ನು, ನಿತ್ಯ ಇಲ್ಲಿ ಜಾನುವಾರು ನೋಡಿಕೊಳ್ಳಲು 7 ಜನ ಗೋಪಾಲಕರು ಸಹ ಇದ್ದಾರೆ. ಇವರು ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆವರೆಗೆ ದನಗಳನ್ನು ಮೇಯಿಸುವ ಕೆಲಸ ಮಾಡುತ್ತಾರೆ.
ಆದರೆ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಜಾನುವಾರುಗಳು ಸೊರಗುತ್ತಿವೆ. ಗೋಶಾಲೆಯಲ್ಲಿಯೂ ಮೇವಿನ ಕೊರತೆಯಿಂದ ಜಾನುವಾರುಗಳು ಸಾವನ್ನಪ್ಪುತ್ತಿರೋ ಆರೋಪ ಕೇಳಿ ಬಂದಿತ್ತು. ಅಲ್ಲದೆ ಪಕ್ಕದ 326 ಎಕರೆ ಅರಣ್ಯ ಇಲಾಖೆಯ ಗುಡ್ಡದಲ್ಲಿ ಕೆಲ ಖಾಸಗಿಯವರು ಉಳಿಮೆ ಮಾಡಿ ದನಗಳನ್ನು ಮೇಯಲು ಅಡ್ಡಿ ಪಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಖುದ್ದು ಇಂದು ಆಡಳಿತಾಧಿಕಾರಿ ಆಶಪ್ಪ ಪೂಜಾರಿ ದನಗಳನ್ನು ಗುಡ್ಡಕ್ಕೆ ಕರೆಯೊಯ್ದು ಮೇಯಿಸಿದ್ದಾರೆ. ಪ್ರತಿನಿತ್ಯ ತಂಪೊತ್ತಿನಲ್ಲಿ ಗುಡ್ಡಕ್ಕೆ ದನಗಳನ್ನು ಕರೆದೊಯ್ದು ಮೇಯಿಸುವಂತೆ ಗೋಪಾಲಕರಿಗೆ ಅಧಿಕಾರಿ ಆಶಪ್ಪ ಸೂಚಿಸಿದ್ದಾರೆ.