ಕಲಬುರಗಿ : ರಾಜ್ಯದಲ್ಲಿ ಬರಗಾಲ ಇದ್ದು, ಕಾವೇರಿ ಜಲಾಶಯದಲ್ಲಿ ನೀರು ಇಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರೋದನ್ನು ವಿರೋಧಿಸಿ ಕರೆ ಕೊಟ್ಟಿದ್ದ ಕರ್ನಾಟಕ ಬಂದ್ಗೆ ಕಲಬುರಗಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ಗೆ ಸಂಪೂರ್ಣ ಬಿಸಿ ತಟ್ಟದಿದ್ದರೂ ಹಲವು ಸಂಘಟನೆ ವಿನೂತನವಾಗಿ ಪ್ರತಭಟನೆ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಶುಕ್ರವಾರ ಬೆಳ್ಳಂ ಬೆಳಗ್ಗೆ ಹೋರಾಟಕ್ಕಿಳಿದ ಕರ್ನಾಟಕ ರಾಜ್ಯ ರೈತ ಸಂಘಟನೆ ಕಾರ್ಯಕರ್ತರು ಕೇಂದ್ರ ಬಸ್ ನಿಲ್ದಾಣದ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಪರಿಣಾಮ ಕೆಲಹೊತ್ತು ಸಾರಿಗೆ ಬಸ್ ಸಂಚಾರ ಸ್ಥಗಿಗೊಂಡು ಪ್ರಯಾಣಿಕರು ಪರದಾಡಿದರು. ಈ ಸಂದರ್ಭದಲ್ಲಿ ಪ್ರತಿಭಟನಾ ನಿರತ ರೈತ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.
ಇತ್ತ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು, ಕಾವೇರಿ ನೀರು ರಕ್ಷಣೆ ಜೊತೆಗೆ ಮಹಾದಾಯಿ ಜಲಕ್ಕಾಗಿ ಪ್ರತಿಭಟನೆ ನಡೆಸಿದರು. ಎಸ್ವಿಪಿ ವೃತ್ತದಿಂದ ಜಿಲ್ಲಾಡಳಿತ ಕಚೇರಿ ಆವರಣದಲ್ಲಿರುವ ಸಂಸದರ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.ಕಾವೇರಿಗಾಗಿ ವಿಶೇಷಚೇತ ವ್ಯಕ್ತಿ ಹೋರಾಟಕ್ಕೆ ಧುಮುಕಿರುವುದು ವಿಶೇಷವಾಗಿತ್ತು.
ಕ್ರಮೇಣ ಪ್ರತಿಭಟನೆ ಕಾವು ಏರುತ್ತಿದ್ದಂತೆ ಕನ್ನಡಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು, ನಗರದ ಸೂಪರ್ ಮಾರ್ಕೆಟ್ನಲ್ಲಿ ತಹಶಿಲ್ದಾರ್ ಕಚೇರಿ ಎದುರು, ಖಾಲಿ ಕೊಡ ಪ್ರದರ್ಶಿಸಿ, ಅರೆಬೆತ್ತಲೆಯಾಗಿ ವಿನೂತನವಾಗಿ ಹೋರಾಟ ಮಾಡಿದರು. ಬಿಸಿಲನ್ನು ಲೆಕ್ಕಿಸದೇ ನೆಲದ ಮೇಲೆ ಹೊರಳಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಕಿಡಿ ಕಾರಿದರು. ಇನ್ನೊಂದೆಡೆ ತಮಿಳುನಾಡು ಬ್ಯಾಂಕ್ಗೆ ಮುತ್ತಿಗೆ ಹಾಕಲು ಮುಂದಾದ 30 ಕ್ಕೂ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.