ಕಲಬುರಗಿ:ಪ್ರಣವಾನಂದ ಸ್ವಾಮೀಜಿ ಈಡಿಗ ಸಮುದಾಯದ ಸ್ವಾಮೀಜಿ ಅಲ್ಲ ಎಂಬ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ.ಎಂ.ತಿಮ್ಮೇಗೌಡ ಹೇಳಿಕೆ ರಾಜಕೀಯ ಪ್ರೇರಿತವಾದದ್ದು ಎಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಅಧ್ಯಕ್ಷ ಸತೀಶ್ ಗುತ್ತೇದಾರ ಆಕ್ರೋಶ ಹೊರಹಾಕಿದ್ದಾರೆ. ಪ್ರಣವಾನಂದ ಶ್ರೀಗಳು ಈಡಿಗ ಸಮುದಾಯದ ಸ್ವಾಮೀಜಿ ಅಲ್ಲ ಎನ್ನುವ ಮೂಲಕ ಸಂತ ಪರಂಪರೆಗೆ ಅಪಮಾನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಶ್ರೀಗಳು ಇಲ್ಲಿವರೆಗೆ ಈಡಿಗ ಸಮುದಾಯದ ಸ್ವಾಮೀಜಿ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಈಡಿಗ ಬಿಲ್ಲವ ಸಮುದಾಯದ ಪರವಾಗಿ ಹೋರಾಟ ಮಾಡುತ್ತಾ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದಾರೆ. ಆದರೆ ತಿಮ್ಮೇಗೌಡ ಅವರು ಸುದ್ದಿಗೋಷ್ಠಿ ನಡೆಸಿ ಶ್ರೀಗಳನ್ನು ಅವಮಾನಿಸಿದ್ದು ಶೋಭೆ ತರುವಂತದ್ದಲ್ಲ. ಈ ಹಿಂದೆ ಗಂಗಾವತಿಯಲ್ಲಿ ಶ್ರೀಗಳ ಜೊತೆ ವೇದಿಕೆ ಹಂಚಿಕೊಂಡವರು ಈಗ ಅವರ ವಿರುದ್ಧ ಮಾತನಾಡುವುದು ಎಷ್ಟು ಸೂಕ್ತ ಎಂದು ಪ್ರಶ್ನೆ ಮಾಡಿದರು. ಸಮುದಾಯದ ಶ್ರೀಗಳು ಅಲ್ಲದಿದ್ದರೆ ಅಂದು ವೇದಿಕೆಯಿಂದ ಅವರನ್ನು ದೂರ ಇಡಬೇಕಾಗಿತ್ತು. ಅಥವಾ ತಾವೇ ವೇದಿಕೆಯಿಂದ ದೂರ ಉಳಿಯಬೇಕಾಗಿತ್ತು ಎಂದು ಸತೀಶ ಗುತ್ತೇದಾರ ಸ್ಪಷ್ಟೀಕರಣಕ್ಕೆ ಆಗ್ರಹಿಸಿದರು.
ತಿಮ್ಮೇಗೌಡರ ಹೇಳಿಕೆ ಸಂಪೂರ್ಣ ರಾಜಕೀಯ ಪ್ರೇರಿತವಾದದ್ದು, ಸಮಾಜದ ಒಬ್ಬರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ದೊರಕಿಸಿ ಕೊಡುವ ಹಿನ್ನೆಲೆಯಲ್ಲಿ ಕೆಲ ರಾಜಕೀಯ ನಾಯಕರ ಓಲೈಕೆಗೆ ಹೀಗೆ ಹೇಳಿದ್ದಾರೆ. ಇನ್ಮುಂದೆ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದಿಂದ ಪ್ರಣವಾನಂದ ಶ್ರೀಗಳ ವಿರುದ್ಧ ಅವಮಾನಿತ ಹೇಳಿಕೆ ಹೊರಬಂದ್ರೆ ಸಮುದಾಯದಿಂದ ಪ್ರತಿಭಟನೆ ಎದುರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಬಿ.ಕೆ.ಹರಿಪ್ರಸಾದ್ಗೆ ಸಚಿವ ಸ್ಥಾನ ನೀಡಿ:ಹಿಂದಿನಿಂದಲೂ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರಗಳು ಈಡಿಗ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡುತ್ತಾ ಬಂದಿವೆ. ಆದರೆ ಈ ಬಾರಿ ಕೇವಲ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಈಡಿಗ ಸಮುದಾಯದ ಬಿ.ಕೆ.ಹರಿಪ್ರಸಾದ್ ಓರ್ವ ಹಿರಿಯ ರಾಜಕೀಯ ನಾಯಕರು, ರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸಿದ ಅನುಭವ ಇದೆ. ಅವರಿಗೆ ಸಚಿವ ಸ್ಥಾನ ನೀಡಿ, ಅವರ ಅನುಭವ ರಾಜ್ಯ ಕಾಂಗ್ರೆಸ್ ಸರ್ಕಾರ ಬಳಸಿಕೊಳ್ಳಬೇಕು ಎಂದು ಸತೀಶ ಗುತ್ತೇದಾರ ಹೇಳಿದರು.
ಪ್ರಣವಾನಂದ ಸ್ವಾಮೀಜಿಗಳಿಗೂ ಈಡಿಗರ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ:ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಅಧ್ಯಕ್ಷ ಡಾ.ಎಂ.ತಿಮ್ಮೇಗೌಡ, ಸ್ವಯಂ ಘೋಷಿತ ಸ್ವಾಮೀಜಿ ಎಂದು ಹೇಳಿಕೊಂಡು ತಿರುಗುತ್ತಿರುವ ಪ್ರಣವಾನಂದ ಸ್ವಾಮೀಜಿಗೆ ಹಾಗೂ ಸಮುದಾಯಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮುಂದುವರೆದು ಶ್ರೀಗಳು ಸಮುದಾಯದಲ್ಲಿ ಒಡಕುಗಳನ್ನು ಮೂಡಿಸುತ್ತಿರುವುದು ರಾಜಕೀಯ ಮುಖಂಡರಲ್ಲಿ ಭಿನ್ನಾಭಿಪ್ರಾಯ ಮೂಡಿಸಿ ರಾಜಕೀಯ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿರುವುದು ಈ ದಿನಗಳಲ್ಲಿ ಗಮನಕ್ಕೆ ಬಂದಿದೆ. ಇದು ಈಡಿಗ ಸಮುದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಕರ್ನಾಟಕ ಆರ್ಯ ಈಡಿಗ ಸಂಘ 1944ರ ಮುಂಚೆಯೇ ಅಸ್ವಿತ್ವಕ್ಕೆ ಬಂದಿದ್ದರೂ 2008 ರವರೆಗೆ ಧಾರ್ಮಿಕ ಪೀಠವನ್ನು ಅಸ್ವಿತ್ವಕ್ಕೆ ತಂದಿರಲಿಲ್ಲ, ಆ ದಿನಗಳಲ್ಲಿ ಧಾರ್ಮಿಕ ಪೀಠಕ್ಕೆ ಸ್ವಾಮಿಗಳು ಇರಲಿಲ್ಲ,2008 ರಲ್ಲಿ ಸಮುದಾಯದ ಮೊದಲ ಗುರುಗಳನ್ನಾಗಿ ರೇಣುಕಾನಂದ ಶ್ರೀಗಳನ್ನು ಪಟ್ಟಾಭೀಷೇಕ ಮಾಡಲಾಗಿತ್ತು. ಬಳಿಕ ರೇಣುಕಾನಂದ ಶ್ರೀಗಳು 2014 ರಲ್ಲಿ ತಮ್ಮ ಆಧ್ಯಾತ್ಮಿಕ ಸಾಧನೆ ಮುಂದುವರೆಸುವ ಪ್ರಯುಕ್ತ ಪೀಠ ತ್ಯಾಗ ಮಾಡಿದ್ದರು. ಬಳಿಕ ಸಮಾಜದ ಸರ್ವರ ಸಮ್ಮತಿ ಪಡೆದು ಕೇರಳದ ಶಿವಗಿರಿಯಲ್ಲಿ ನಾರಾಯಣ ಗುರು ದೀಕ್ಷೆ ಪಡೆದಿದ್ದಂತಹ ವಿಖ್ಯಾತಾನಂದ ಸ್ವಾಮೀಜಿ ಅವರನ್ನು ಸಮುದಾಯದ ಗುರುಗಳನ್ನಾಗಿ ಸ್ವೀಕರಿಸಲಾಗಿದೆ. ಆದ್ರೆ ಸ್ವಯಂ ಘೋಷಿತ ಸ್ವಾಮೀಜಿ ಪ್ರಣವಾನಂದ ಸ್ವಾಮೀಜಿಗೂ ಸಮಾಜಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಆರ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ಹೇಳಿದ್ದಾರೆ.
ಇದನ್ನೂ ಓದಿ:ಪ್ರಣವಾನಂದ ಸ್ವಾಮೀಜಿಗಳಿಗೂ ಈಡಿಗರ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ: ಆರ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ