ಕಲಬುರಗಿ:ಶಾಲೆ ಪುನರಾರಂಭಿಸಲು ಸರ್ಕಾರ ಗಂಭೀರ ಚಿಂತನೆ ಮಾಡುತ್ತಿದ್ದು, ಪೋಷಕರು ಮಾತ್ರ ಸದ್ಯಕ್ಕೆ ಶಾಲೆ ಪುನರಾರಂಭಿಸುವುದು ಬೇಡ ಅಂತಿದ್ದಾರೆ. ಜಿಲ್ಲೆಯಲ್ಲಿ ಒಂದಡೆ ಸೋಂಕು ತಗುಲಿ 13 ಜನ ಶಿಕ್ಷಕರು ಸಾವನ್ನಪ್ಪಿದ್ದು, ವಠಾರ ಶಾಲೆಯ ನಾಲ್ವರು ಮಕ್ಕಳಿಗೆ ಸೋಂಕು ತಗುಲಿದೆ. ಇದರಿಂದ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಮುಂದುವರೆದಿದೆ.
ಮಾರಕ ಕೊರೊನಾ ಸೋಂಕಿಗೆ ದೇಶದಲ್ಲಿ ಮೊದಲನೇ ಬಲಿಯಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಸದ್ಯಕ್ಕೆ ಶಾಲೆ ಪ್ರಾರಂಭಿಸುವುದು ಬೇಡ ಅಂತ ಪೋಷಕರು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಆನ್ಲೈನ್ ಪಾಠ, ವಿದ್ಯಾಗಮ ಯೋಜನೆಯಲ್ಲಿ ವಠಾರ ಶಾಲೆ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ. ಸದ್ಯಕ್ಕೆ ಕೊರೊನಾ ಆತಂಕ ಕೂಡ ದೂರಾಗಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಹೋಗುತ್ತಿದೆ. ಮಾಸ್ಕ್, ಸ್ಯಾನಿಟೈಸರ್, ಸೋಷಿಯಲ್ ಡಿಸ್ಟೆನ್ಸ್ ಸೇರಿದಂತೆ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ವಠಾರ ಶಾಲೆಯಲ್ಲಿ ಬೋಧನೆ ಮಾಡಲಾಗುತ್ತಿದೆ. ಹೀಗಿರುವಾಗ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ವಠಾರ ಶಾಲೆಯ ನಾಲ್ಕು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಸದ್ಯಕ್ಕೆ ಸೋಂಕಿನ ಭಯ ಪೋಷಕರಲ್ಲಿ ಇನ್ನೂ ಮುಂದುವರೆದಿದ್ದು, ಮಕ್ಕಳ ಹಿತದೃಷ್ಟಿಯಿಂದ ಇನ್ನಷ್ಟು ದಿವಸ ಶಾಲೆ ಪುನರಾರಂಭಿಸುವುದು ಬೇಡ ಅಂತಿದ್ದಾರೆ.
ಕಲಬುರಗಿ ಜಿಲ್ಲೆಯ 1,071 ಊರುಗಳಲ್ಲಿ 3638 ಸರ್ಕಾರಿ ಶಾಲೆಗಳಿದ್ದು, ಮಕ್ಕಳ ಹಾಗೂ ಶಿಕ್ಷಕರ ಸಂಖ್ಯೆಗೆ ತಕ್ಕಂತೆ ವಠಾರ ಶಾಲೆಗಳನ್ನು ತೆರದು ಶೈಕ್ಷಣಿಕ ಚಟುವಟಿಕೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಇಲ್ಲಿವರೆಗೆ ಒಟ್ಟು 13 ಜನ ಸರ್ಕಾರಿ ಶಾಲೆಯ ಶಿಕ್ಷಕರು ಸೋಂಕಿನಿಂದ ಮೃತಪಟ್ಟಿದ್ದಾರೆ. ಅಫಜಲಪುರ 2, ಆಳಂದ 2, ಜೇವರ್ಗಿ 2, ಚಿತಾಪುರ 3, ಕಲಬುರಗಿ ಉತ್ತರ ಕ್ಷೇತ್ರ ಎರಡು, ದಕ್ಷಿಣದಲ್ಲಿ ಇಬ್ಬರು ಶಿಕ್ಷಕರು ಹೀಗೆ ಒಟ್ಟು 13 ಜನ ಶಿಕ್ಷಕರು ಸೋಂಕಿನಿಂದ ಮೃತಪಟ್ಟಿದ್ದಾರೆ. ಸದ್ಯ 32 ಶಿಕ್ಷಕರು ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಪಿ.ಬಾಡಗಂಡಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ವಠಾರ ಶಾಲೆಯಲ್ಲಿ ಅಭ್ಯಾಸ ಮಾಡ್ತಿದ್ದ ನಾಲ್ವರು ಮಕ್ಕಳಿಗೆ ಕೊರೊನಾ ಅಂಟಿದೆ. ಈ ಮುಂಚೆ ಶಾಲೆಯ ಶಿಕ್ಷಕರೊಬ್ಬರಿಗೆ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ 20 ಜನ ಶಿಕ್ಷಕರಿಗೆ ಮತ್ತು 207 ವಿದ್ಯಾರ್ಥಿಗಳಿಗೆ ಕೋವಿಡ್ ರ್ಯಾಂಡಮ್ ಟೆಸ್ಟ್ ಮಾಡಲಾಗಿತ್ತು. ಶಿಕ್ಷಕರೆಲ್ಲರಿಗೂ ನೆಗೆಟಿವ್ ಬಂದಿದ್ದು, ನಾಲ್ವರು ವಿದ್ಯಾರ್ಥಿಗಳಿಗೆ ಪಾಸಿಟಿವ್ ದೃಢಪಟ್ಟಿದೆ. ಇನ್ನೂ 24 ವಿದ್ಯಾರ್ಥಿಗಳ ವರದಿ ಬರಬೇಕಿದೆ. ಹೀಗಾಗಿ ವಠಾರ ಶಾಲೆಯೂ ಸುರಕ್ಷಿತವಲ್ಲ, ಮಕ್ಕಳ ಕ್ಷೇಮಕ್ಕಾಗಿ ಇನ್ನಷ್ಟು ದಿನ ಶಾಲೆಗೆ ರಜೆ ಇರುವುದೇ ಸೂಕ್ತ ಎನ್ನುತ್ತಿದ್ದಾರೆ ಪೋಷಕರು.