ಕಲಬುರಗಿ:ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ಚುನಾವಣಾ ಕಣ ರಂಗೇರುತ್ತಿದೆ. ಶತಾಯಗತಾಯ ಪಾಲಿಕೆ ಗದ್ದುಗೆ ಏರಲು ಕಾಂಗ್ರೆಸ್, ಬಿಜೆಪಿ ನಡುವೆ ಗುದ್ದಾಟ ಶುರುವಾಗಿದೆ. ಕಲಬುರಗಿ ಪಾಲಿಕೆ ಕಾಂಗ್ರೆಸ್ಗೆ ಭದ್ರಕೋಟೆ ಎನ್ನಲಾಗಿದ್ದು, ಕಾಂಗ್ರೆಸ್ ಭದ್ರಕೋಟೆ ಛಿದ್ರ ಮಾಡಲು ಬಿಜೆಪಿ ಮತ ಬೇಟೆ ತಂತ್ರ ಹೆಣೆಯುತ್ತಿದೆ.
ಎಲೆಕ್ಷನ್ ಎಕ್ಸ್ಪರ್ಟ್ ಎಂದೇ ಕರೆಯಲ್ಪಡುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಕಲಬುರಗಿ ಪಾಲಿಕೆ ಉಸ್ತುವಾರಿ ವಹಿಸಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಚುನಾವಣೆ ತಂತ್ರಗಾರಿಕೆ ರೂಪಿಸಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ಬಿಜೆಪಿಯನ್ನ ಗೆಲ್ಲಿಸುವಲ್ಲಿ ರವಿಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು.
ಕಲಬುರಗಿ ಪಾಲಿಕೆ ಗದ್ದುಗೆ ಏರಲು ಕಾಂಗ್ರೆಸ್-ಬಿಜೆಪಿ ರಣತಂತ್ರ ಕಾಂಗ್ರೆಸ್ ಭದ್ರಕೋಟೆ ಮೇಲೆ ಬಿಜೆಪಿ ಕಣ್ಣು
ಇದೀಗ ಕಲಬುರಗಿ ಪಾಲಿಕೆ ಚುನಾವಣೆ ಜವಾಬ್ದಾರಿ ಹೊತ್ತಿರುವ ರವಿಕುಮಾರ್, ಪಾಲಿಕೆಯ 55 ವಾರ್ಡ್ಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯೋದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಸದಾ ಪಾರುಪತ್ಯ ಸಾಧಿಸುತ್ತ ತನ್ನ ತೆಕ್ಕೆಗೆ ಪಡೆದು ಆಡಳಿತ ನಡೆಸುತ್ತ ಬಂದಿರುವ ಕಾಂಗ್ರೆಸ್ ಕೂಡ ತನ್ನ ಭದ್ರಕೋಟೆಯನ್ನ ರಕ್ಷಿಸಿಕೊಂಡು ಮತ್ತೆ ಆಡಳಿತ ನಡೆಸುವ ಲೆಕ್ಕಾಚಾರದಲ್ಲಿ ತೊಡಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು, ಸಾಧನೆಗಳನ್ನು ಜನರ ಮುಂದಿಟ್ಟು ಗದ್ದುಗೆ ಏರಲು ಯೋಜನೆ ರೂಪಿಸಿಕೊಂಡಿದೆ.
ಒಟ್ನಲ್ಲಿ ಕಲಬುರಗಿ ಪಾಲಿಕೆ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಎನ್ನಲಾಗುತ್ತಿದ್ದು, ಕಾಂಗ್ರೆಸ್ ತನ್ನ ಭದ್ರಕೋಟೆ ರಕ್ಷಿಸಿಕೊಳ್ಳುವ ತಂತ್ರ ರೂಪಿಸುತ್ತಿದ್ದರೆ ಎರಡನೇ ಬಾರಿಗೆ ಪಾಲಿಕೆ ಅಧಿಕಾರ ಹಿಡಿಯಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ:ಮೊದಲ ಬಾರಿಗೆ ಬಿಜೆಪಿಗೆ ಒಲಿದ ಮೇಯರ್ ಪಟ್ಟ.. ಮೈಸೂರು ಮಹಾನಗರ ಪಾಲಿಕೆಯಲ್ಲಿ ಇತಿಹಾಸ ಸೃಷ್ಟಿ