ಕಲಬುರಗಿ:ಕಲಬುರಗಿ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ನೂತನವಾಗಿ ಸೇರ್ಪಡೆಯಾದ ಬಿಜೆಪಿಯ ಐವರು ವಿಧಾನ ಪರಿಷತ್ ಸದಸ್ಯರಿಗೂ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ನೀಡಿ ಕಲಬುರಗಿ ಹೈಕೋರ್ಟ್ ವಿಭಾಗೀಯ ದ್ವಿಸದಸ್ಯ ಪೀಠ ತೀರ್ಪು ನೀಡಿದೆ. ಎಂಎಲ್‌ಸಿ ಲಕ್ಷ್ಮಣ ಸೌದಿ, ತುಳಸಿ ಮುನಿರಾಜಗೌಡ, ಭಾರತಿ ಶೆಟ್ಟಿ, ಬೀದರ್ ಎಂಎಲ್‌ಸಿ ರಘುನಾಥ ಮಲ್ಕಾಪುರೆ ಹಾಗೂ ಸದ್ಯ ರಾಜ್ಯಸಭಾ ಸದಸ್ಯರಾಗಿರುವ ಲೇಯರ್ ಸಿಂಗ್ ಅವರು ಮತ ಚಲಾಯಿಸಲು ಅರ್ಹರು ಎಂದು ಹೈಕೋರ್ಟ್ ಗ್ರಿನ್ ಸಿಗ್ನಲ್ ನೀಡಿದೆ.
ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯ ಫಲಿತಾಂಶದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಹೀಗಾಗಿ ಮೇಯರ್ ಚುನಾವಣೆಗೆ ಕಂಟಕ ಎದುರಾಗಿತ್ತು. ನಂತರದ ದಿನಗಳಲ್ಲಿ ಬಿಜೆಪಿಯ ಐವರು ಎಂಎಲ್‌ಸಿಗಳ ಹೆಸರು ಕಲಬುರಗಿ ಮತದಾರರ ಪಟ್ಟಿಗೆ ಸೇರಿಸಲಾಗಿತ್ತು. ಆದರೆ ಮೇಯರ್ ಚುನಾವಣೆಗೆ ಪೂರಕವಾಗಲಿ ಎನ್ನುವ ಕಾರಣಕ್ಕೆ ಹೊರ ಜಿಲ್ಲೆಯ ಎಂಎಲ್‌ಸಿಗಳ ಹೆಸರು ಇಲ್ಲಿನ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಆಕ್ಷೇಪಿಸಿ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಕಲಬುರಗಿ ಹೈಕೋರ್ಟ್ ನ್ಯಾಯಮೂರ್ತಿ ಇಂದರೇಶ್ ಅವರ ನೇತೃತ್ವದ ಏಕಸದಸ್ಯ ಪೀಠ, ಕಾಂಗ್ರೆಸ್ ಅರ್ಜಿ ಪುರಸ್ಕರಿಸಿ ಹೊಸದಾಗಿ ಸೇರ್ಪಡೆಯಾದ ಐವರ ಹೆಸರು ಕೈಬಿಟ್ಟು ಹಳೆಯ ಮತದಾರರ ಪಟ್ಟಿ ಅನ್ವಯ ಮೇಯರ್ ಚುನಾವಣೆ ನಡೆಸಲು ಸೂಚಿಸಿತ್ತು. ಆದರೆ ಬಿಜೆಪಿ ಎಂಎಲ್ಸಿಗಳು ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಕಲಬುರಗಿ ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಮತ್ತು ಅನಿಲ್ ಬಿ. ಕಟ್ಟಿ ಅವರಿದ್ದ ದ್ವಿಸದಸ್ಯ ಪೀಠ ಶುಕ್ರವಾರ ಬಿಜೆಪಿ ಅರ್ಜಿ ಪುರಸ್ಕರಿಸಿದ್ದು, ಐವರು ಪರಿಷತ್ ಸದಸ್ಯರ ಮತದಾನಕ್ಕೆ ಗ್ರೀನ್ ಸಿಗ್ನಲ್ ನೀಡಿ ಆದೇಶ ನೀಡಿದೆ.
ಇದನ್ನೂ ಓದಿ:ಕಲಬುರಗಿ ಮೇಯರ್-ಉಪಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್.. ಕಿಂಗ್ ಮೇಕರ್ ಜೆಡಿಎಸ್ ಬೆಂಬಲ ಯಾರಿಗೆ?
ಅಲ್ಲದೆ ಸರ್ಕಾರ ಈ ಮುಂಚೆ ನಿಗದಿ ಮಾಡಿದ್ದ ಮೇಯರ್ ಸ್ಥಾನಕ್ಕೆ ಎಸ್ಸಿ ಪುರುಷ ಮಿಸಲು ಆದೇಶ ಕೂಡಾ ಹೈಕೋರ್ಟ್ ಎತ್ತಿಹಿಡಿದಿದೆ. ಕಳೆದ 2022 ರ ಫೆಬ್ರವರಿ 22 ರಂದು ಪಾಲಿಕೆ ಮೇಯರ್ ಚುನಾವಣೆ ನಿಗದಿಯಾಗಿತ್ತು. ಆದರೆ ಚುನಾವಣೆ ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರಿಂದ ಮುಂದೂಡಲಾಗಿತ್ತು.
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಒಟ್ಟು 55 ವಾರ್ಡಗಳಿದ್ದು, ಸೆ.3ರಂದು ಚುನಾವಣೆ ನಡೆದಿತ್ತು. ಸೆ.6 ರಂದು ಫಲಿತಾಂಶ ಬಂದಾಗ ಕಾಂಗ್ರೆಸ್ 27, ಬಿಜೆಪಿ 23 ಮತ್ತು ಜೆಡಿಎಸ್ 4 ಸ್ಥಾನಗಳಲ್ಲಿ ಗೆದ್ದಿದ್ದವು. ಒಬ್ಬ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದರು. ಚುನಾಯಿತ 55 ಸದಸ್ಯರು, ಇಬ್ಬರು ಸಂಸದರು, ಮೂವರು ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಒಟ್ಟು ಬಲಾಬಲ 62 ಆಗಲಿದೆ. ಹೀಗಾಗಿ ಮೇಯರ್ ಗದ್ದುಗೆ ಏರಬೇಕಾದರೆ 31 ಮ್ಯಾಜಿಕ್ ಸಂಖ್ಯೆ ಗಡಿ ದಾಟಬೇಕು. ಆದರೆ ಯಾವುದೇ ಪಕ್ಷ ಇಲ್ಲಿ ಸ್ಪಷ್ಟ ಬಹುಮತ ಪಡೆದಿಲ್ಲ, ಕಾಂಗ್ರೆಸ್ ಮತ್ತು ಬಿಜೆಪಿ ಮೊದಲ ಎರಡು ಸ್ಥಾನಗಳಲ್ಲಿದ್ದರೂ ಅಧಿಕಾರಕ್ಕೆ ಬರಲು ಜೆಡಿಎಸ್ ನೆರವು ಅನಿವಾರ್ಯವಾಗಿತ್ತು. ಆದರೆ ಕಿಂಗ್ ಮೇಕರ್ ಸ್ಥಾನದಲ್ಲಿರುವ ಜೆಡಿಎಸ್ ಮೇಯರ್ ಪಟ್ಟಕ್ಕಾಗಿ ಪಟ್ಟು ಹಿಡಿದಿದೆ. ಹೀಗಾಗಿ ಎರಡು ಪಕ್ಷದವರು ಜೆಡಿಎಸ್ನಿಂದ ದೂರ ಸರಿದಿದ್ದಾರೆ.