ಕಲಬುರಗಿ :ಕೊರೊನಾ ಕರ್ಫ್ಯೂ ಹಿನ್ನೆಲೆ ಬಹುತೇಕರು ಕೆಲಸ ಕಳೆದುಕೊಂಡಿದ್ದಾರೆ. ಖರ್ಚಿಗೆ ಹಣ ಇಲ್ಲದೆ ಜನ ಪರದಾಟ ನಡೆಸುತ್ತಿದ್ದಾರೆ.
ಸತ್ತಾಗ ದೇಹ ಸುಡಲು ಕಟ್ಟಿಗೆ ಖರೀದಿಸಲಾಗದಷ್ಟು ಕಂಗಾಲಾಗಿದ್ದಾರೆ. ಅಂತಹ ಬಡವರಿಗೆ ಉಚಿತ ಕಟ್ಟಿಗೆ ನೀಡುವ ಮೂಲಕ ಇಲ್ಲೊಬ್ಬರು ಮಾನವೀಯತೆ ಮೆರೆದಿದ್ದಾರೆ.
ಕೊರೊನಾ ಲಾಕ್ಡೌನ್ ಹಿನ್ನೆಲೆ ಅದೆಷ್ಟೋ ಜನರು ಒಂದೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದಾರೆ. ಹಣವುಳ್ಳವರು ಹೃದಯವಂತರು ದವಸ, ಧಾನ್ಯ ಸೇರಿ ಅಗತ್ಯ ದಿನಬಳಕೆ ವಸ್ತುಗಳನ್ನ ದಾನ ಮಾಡುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬರು ಸತ್ತಾಗ ಅಂತ್ಯಕ್ರಿಯೆಗೆ ಉಚಿತ ಕಟ್ಟಿಗೆ ನೀಡುವ ಮೂಲಕ ಸದ್ದಿಲ್ಲದೆ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.
ಸಾಮಿಲ್ ವ್ಯಾಪಾರಿಯಿಂದ ಮಾನವೀಯ ಕಾರ್ಯ ಕಲಬುರಗಿ ನಗರದ ಹೊಸ ಜೇವರ್ಗಿ ರಸ್ತೆಯಲ್ಲಿರುವ ಚಿತ್ತಾರಿ ಸಾ-ಮಿಲ್ ಓನರ್ ವೆಂಕಟಸ್ವಾಮಿ ಚಿತ್ತಾರಿ ಉಚಿತ ಕಟ್ಟಿಗೆ ನೀಡುವ ಮೂಲಕ ಕೊರೊನಾದಂತ ಸಮಯದಲ್ಲಿ ಅಗತ್ಯವಿರುವವರ ಸೇವೆಗೆ ಮುಂದಾಗಿದ್ದಾರೆ.
ಚಿತ್ತಾರಿ ಸಾ-ಮಿಲ್ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡುವ ಸ್ಥಳವಿದ್ದು ಕೊರೊನಾ ಎರಡನೇ ಅಲೆ ಪ್ರಾರಂಭವಾದಾಗಿನಿಂದ ನಿತ್ಯ ಹತ್ತಾರು ಮೃತ ದೇಹಗಳನ್ನು ಇಲ್ಲಿ ಶವಸಂಸ್ಕಾರ ಮಾಡಲಾಗುತ್ತಿದೆ. ಮೂಲತಃ ಕಟ್ಟಿಗೆ ವ್ಯಾಪಾರಿಯಾದ ವೆಂಕಟಸ್ವಾಮಿ ಚಿತ್ತಾರಿ ಅವರ ಬಳಿ ಕಟ್ಟಿಗೆ ವ್ಯಾಪಾರ ಜೋರಾಗಿ ನಡೆದಿದೆ.
ಕಟ್ಟಿಗೆಯ ಬೇಡಿಕೆ ಹೆಚ್ಚಾದಂತೆ ನಗರದ ಹಲವಡೆ ಕಟ್ಟಿಗೆಯ ಬೆಲೆ ಏರಿಕೆ ಕಂಡಿದೆ. ಆದರೆ ಚಿತ್ತಾರಿ ಅವರು ಬೆಲೆ ಏರಿಕೆ ಮಾಡಿಲ್ಲ. ಹಿಂದಿನಂತೆ 700 - 800 ರೂಪಾಯಿಗೆ ಕ್ವಿಂಟಾಲ್ ಕಟ್ಟಿಗೆ ಕೊಡುತ್ತಿದ್ದಾರೆ.
ಬಡವರು ಬಂದರೆ ಮೂಲ ಬೆಲೆಯಲ್ಲಿಯೂ ಕಡಿಮೆ ಮಾಡುತ್ತಾರೆ. ಕಡು ಬಡವರು ಹಣ ಬರಿಸಲು ಆಗದಂತ ದುಸ್ಥಿತಿಯಲ್ಲಿ ಇರುವವರಿಗೆ ಉಚಿತವಾಗಿ ಅಂತ್ಯಕ್ರಿಯೆಗೆ ಕಟ್ಟಿಗೆ ನೀಡುತ್ತಿದ್ದಾರೆ.
ಬೇವು, ಮಾವು ಹಾಗೂ ಜಾಲಿ ಕಟ್ಟಿಗೆ ಸರಿಸುಮಾರು 100 ಕ್ವಿಂಟಾಲ್ ನಷ್ಟು ಕಟ್ಟಿಗೆ ಮಾರಾಟ ಮಾಡುತ್ತಾರೆ. ಇದರಲ್ಲಿ 10 ರಿಂದ 20 ಕ್ವಿಂಟಾಲ್ ಕಟ್ಟಿಗೆ ಉಚಿತವಾಗಿ ನೀಡುವ ಮೂಲಕ ಸದ್ದಿಲ್ಲದೆ ಜನಪರ ಸೇವೆ ಸಲ್ಲಿಸುತ್ತಿದ್ದಾರೆ. ವೆಂಕಟಸ್ವಾಮಿ ಚಿತ್ತಾರಿ ಅವರ ಈ ವಿಭಿನ್ನ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.