ಕಲಬುರಗಿ : ಪೆಟ್ರೋಲ್ ಬಂಕ್ ಬಂದ್ ವದಂತಿಗೆ ಜಿಲ್ಲಾಡಳಿತ ತೆರೆ ಎಳೆದಿದೆ. ಪೆಟ್ರೋಲ್ ಬಂಕ್ ಬಂದ್ ಮಾಡಲು ಜಿಲ್ಲಾಡಳಿತ ನಿರ್ದೇಶನ ನೀಡಿಲ್ಲ ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಬಿ. ಶರತ್ ಸ್ಪಷ್ಟನೆ ನೀಡಿದ್ದಾರೆ.
ಪೆಟ್ರೋಲ್ ಬಂಕ್ ಬಂದ್ ಆಗಲ್ಲ, ವದಂತಿಗಳಿಗೆ ಕಿವಿಕೊಡಬೇಡಿ : ಜಿಲ್ಲಾಧಿಕಾರಿ ಸ್ಪಷ್ಟನೆ - ಕಲಬುರಗಿ ಸುದ್ದಿ
ಕಲಬುರಗಿ ನಗರದಲ್ಲಿ ಪೆಟ್ರೋಲ್ ಬಂಕ್ ಬಂದ್ ವದಂತಿಗೆ ಜಿಲ್ಲಾಡಳಿತ ತೆರೆ ಎಳೆದಿದ್ದು, ಯಾವುದೇ ಬಂಕ್ ಬಂದ್ ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ಬಿ. ಶರತ್ ಸ್ಪಷ್ಟನೆ ನೀಡಿದ್ದಾರೆ.

ಕೊರೊನಾ ಭೀತಿಯಿಂದ ಜಿಲ್ಲಾದ್ಯಂತ ಇಂದಿನಿಂದ ಎಂಟು ದಿನ ಪೆಟ್ರೋಲ್ ಬಂಕ್ ಬಂದ್ ಮಾಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಪೆಟ್ರೋಲ್ ಬಂಕ್ ಬಂದ ಆಗುವ ಆತಂಕದಲ್ಲಿ ಜನ ರಾತ್ರೋ ರಾತ್ರಿ ತಮ್ಮ ವಾಹನಗಳನ್ನು ತಂದು ಸರತಿ ಸಾಲಿನಲ್ಲಿ ನಿಲ್ಲಿಸಿ ಟ್ಯಾಂಕ್ ಫುಲ್ ಮಾಡಿಸಿದ್ರು.
ಕೆಲವರು ನೀರಿನ ಬಾಟಲಿ, ಕ್ಯಾನ್ ಗಳನ್ನು ತುಂಬಿಸಿಕೊಂಡು ತೆರಳಿದರು. ರಾತ್ರಿ ಬಹುತೇಕ ಬಂಕ್ಗಳು ಜನರಿಂದ ಕಿಕ್ಕಿರಿದು ತುಂಬಿ ಹೋಗಿದ್ದವು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿ ಶರತ್, ಜಿಲ್ಲಾಡಳಿತದಿಂದ ಬಂಕ್ ಬಂದ್ ಮಾಡುವಂತೆ ನಿರ್ದೇಶನ ನೀಡಿಲ್ಲ, ಪೆಟ್ರೋಲ್ ಬಂಕ್ ಗಳು ಯಥಾಸ್ಥಿತಿ ಕಾರ್ಯನಿರ್ವಹಿಸಲಿವೆ ಎಂದು ಸ್ಪಷ್ಟ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.