ಕಲಬುರಗಿ: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ಕರೆದು ಮೈಮೇಲೆ ಬಿಸಿ ಎಣ್ಣೆ ಸುರಿಯುವ ಮೂಲಕ ವಿಕೃತಿ ಮೆರೆದಿದ್ದ ಮಹಿಳೆಗೆ ನ್ಯಾಯಾಲಯವು 5 ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ಮಕ್ಕಳ ಮೈಮೇಲೆ ಬಿಸಿ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ ಮಹಿಳೆಗೆ ಜೈಲು ಶಿಕ್ಷೆ
ಅಕ್ಕಪಕ್ಕದ ಮನೆಯವರ ಜೊತೆ ನಡೆದ ಗಲಾಟೆಗೆ ಸೇಡು ತೀರಿಸಿಕೊಳ್ಳಲು ಮಕ್ಕಳ ಮೈಮೇಲೆ ಬಿಸಿ ಎಣ್ಣೆ ಸುರಿಯುವ ಮೂಲಕ ಅಮಾನವೀಯತೆ ಮೆರೆದಿದ್ದ ಮಹಿಳೆಗೆ ನ್ಯಾಯಾಲಯ ಜೈಲು ಶಿಕ್ಷೆ, ದಂಡ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.
ಆನಂದನಗರ ಬಡಾವಣೆಯ ನಿವಾಸಿ ಶ್ರೀದೇವಿ ಕೋರವಾರ (57) ಶಿಕ್ಷೆಗೆ ಗುರಿಯಾದ ಮಹಿಳೆ. 2019 ರಲ್ಲಿ ಮನೆ ಅಂಗಳದಲ್ಲಿ ಆಟವಾಡಿಕೊಂಡಿದ್ದ ಅಹನಾ ಮತ್ತು ಪಾರ್ವತಿ ಎಂಬ ಇಬ್ಬರು ಮಕ್ಕಳನ್ನು ಕರೆದು ಚಾಕೋಲೆಟ್ ಕೊಡುವುದಾಗಿ ನಂಬಿಸಿ, ಮನೆ ಒಳಗೆ ಕರೆದುಕೊಂಡು ಹೋಗಿ ಬಿಸಿ ಅಡುಗೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದಳು. ಪರಿಣಾಮ ಓರ್ವ ಬಾಲಕಿಯ ಹಣೆ, ಎದೆ ಹಾಗೂ ತೊಡೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಇನ್ನೋರ್ವ ಬಾಲಕಿಯ ಕೈಬೆರಳುಗಳು ಸುಟ್ಟು ಹೋಗಿದ್ದವು. ಅಕ್ಕಪಕ್ಕದ ಮನೆಯವರ ಜೊತೆ ನಡೆದ ಗಲಾಟೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಕ್ಕಳ ಮೇಲೆ ಸೇಡು ತೀರಿಸಿಕೊಳ್ಳುಲು ಪ್ರಯತ್ನಿಸಿದ್ದಳು.
ಈ ಸಂಬಂಧ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶುಕ್ಲಾಕ್ಷ್ ಪಾಲನ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.