ಕಲಬುರಗಿ: ನಾಡಿನಾದ್ಯಂತ ಮಹಾ ಶಿವರಾತ್ರಿಗಾಗಿ ಎಲ್ಲ ದೇಗುಲಗಳಲ್ಲಿ ಸಕಲ ಸಿದ್ಧತೆಗೆಳು ನಡೆಯುತ್ತಿದ್ದು, ಜಿಲ್ಲೆಯಲ್ಲಿ ವಿಶೇಷವಾಗಿ ಅಡಕೆ ಮತ್ತು ಕಬ್ಬಿನಲ್ಲಿ ಶಿವಲಿಂಗವನ್ನು ಅಲಂಕಾರ ಮಾಡಲಾಗುತ್ತಿದೆ. ಇದು ಎಲ್ಲರ ಗಮನ ಸೆಳೆಯುತ್ತಿದೆ.
ಕಲಬುರಗಿ ಬ್ರಹ್ಮಕುಮಾರಿ ಆಶ್ರಮದಲ್ಲಿ ಅಲಂಕಾರಗೊಂಡ ಶಿವಲಿಂಗ ನಗರದ ಹೊರವಲಯಲ್ಲಿನ ಸೇಡಂ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ಅಮೃತ ಸರೋವರ ಆಶ್ರಮದ ಆವರಣದಲ್ಲಿರುವ ಶಿವಲಿಂಗಕ್ಕೆ ವಿಭಿನ್ನವಾಗಿ ಅಲಂಕಾರ ಮಾಡಲಾಗುತ್ತಿದೆ. ಆಶ್ರಮದಲ್ಲಿ ಸುಮಾರು 25 ಅಡಿ ಎತ್ತರದ ಶಿವಲಿಂಗ ಇದೆ. ಇದರ ಅಲಂಕಾರಕ್ಕಾಗಿ 5 ಕ್ವಿಂಟಲ್ ಹಸಿ ಅಡಕೆ, 1 ಕ್ವಿಂಟಲ್ ಒಣ ಅಡಕೆ ಮತ್ತು ಒಂದು ಟ್ರ್ಯಾಕ್ಟರ್ ಕಬ್ಬನ್ನು ಬಳಸಲಾಗುತ್ತಿದೆ. ಮಂಗಳೂರಿನಿಂದ ಅಡಕೆ ತರಿಸಿಕೊಂಡು ಶಿವಲಿಂಗಕ್ಕೆ ಸುಂದರವಾಗಿ ಲೇಪಿಸಲಾಗುತ್ತಿದೆ.
ಬಗೆ ಬಗೆಯ ಹೂಗಳಿಂದ ಅಲಂಕಾರಗೊಂಡ ಶಿವಲಿಂಗ ಕಳೆದೊಂದು ವಾರದಿಂದ ಶಿವಲಿಂಗದ ಅಲಂಕಾರ ಮಾಡಲಾಗುತ್ತಿದ್ದು, ಹದಿನೈದು ಜನರು ಲಿಂಗಕ್ಕೆ ಅಡಕೆ ಮತ್ತು ಕಬ್ಬನ್ನು ಶೃಂಗಾರ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. 25 ಅಡಿ ಎತ್ತರದ ಶಿವಲಿಂಗದ ಜೊತೆ ಜೊತೆಗೆ ಆಶ್ರಮದಲ್ಲಿ ಸ್ಥಾಪಿಸಿರುವ 12 ಜೋತಿರ್ಲಿಂಗಗಳಿಗೂ ಹಣ್ಣು, ದುಡ್ಡು, ಚಂದನ ಸೇರಿದಂತೆ ವಿವಿಧ ಬಗೆಯ ವಸ್ತುಗಳಿಂದ ಅಲಂಕಾರ ಮಾಡಲಾಗಿದೆ.
ವಿಭೂತಿಯಿಂದ ಅಲಂಕಾರಗೊಂಡ ಶಿವಲಿಂಗ ಈ ಆಶ್ರಮದಲ್ಲಿ ಕಳೆದ ಐದು ವರ್ಷಗಳಿಂದ ಮಹಾಶಿವರಾತ್ರಿ ಹಬ್ಬದಂದು 25 ಅಡಿ ಎತ್ತರದ ಶಿವಲಿಂಗಕ್ಕೆ ಅಲಂಕಾರ ಮಾಡಲಾಗುತ್ತಿದೆ. ಈ ಹಿಂದೆಯೂ ತೆಂಗಿನಕಾಯಿ, ರುದ್ರಾಕ್ಷಿ, ಮುತ್ತು, ತೊಗರಿಕಾಳುಗಳಿಂದ ಶಿವಲಿಂಗವನ್ನು ಅಲಂಕಾರ ಮಾಡಿ ಲಿಂಗ ದರ್ಶನಕ್ಕೆ ಬರುವ ಭಕ್ತರಲ್ಲಿ ಶಿವಭಕ್ತಿ ಹೆಚ್ಚಿಸುವ ಉದ್ದೇಶದಿಂದ ಲಿಂಗಕ್ಕೆ ಬಗೆ ಬಗೆಯ ವಸ್ತುಗಳಿಂದ ಅಲಂಕಾರ ಮಾಡುತ್ತ ಬರಲಾಗುತ್ತಿದೆ. ನಾಳೆ ಬೆಳಗ್ಗೆ 06 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಅಲಂಕೃತ ಶಿವಲಿಂಗದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಸಂಜೆ ಪರಶೀವನ ಧ್ಯಾನದ ಜೊತೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಬೇಳೆ, ಕಾಳುಗಳಿಂದ ಅಲಂಕಾರಗೊಂಡ ಶಿವಲಿಂಗ ಪ್ರತಿವರ್ಷವೂ 25 ಅಡಿ ಎತ್ತರದ ಅಲಂಕೃತ ಶಿವಲಿಂಗ ದರ್ಶನಕ್ಕಾಗಿ 50 ಸಾವಿರಕ್ಕೂ ಹೆಚ್ಚು ಭಕ್ತರು ಕಣ್ತುಂಬಿಕೊಳ್ಳುತ್ತಾರೆ. ಈ ಬಾರಿಯೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: ಎರಡು ವರ್ಷದ ಬಳಿಕ ಮಹಾ ಶಿವರಾತ್ರಿ ಸಂಭ್ರಮ: ಶಿವನ ಆರಾಧನೆಗೆ ರಾಜಧಾನಿ ದೇಗುಲಗಳು ಸಜ್ಜು