ಕಲಬುರಗಿ:ನಗರದಲ್ಲಿ ಸುಮಾರು 6.85 ಲಕ್ಷ ಜನರು ವಾಸವಿದ್ದು, ದಿನದಿಂದ ದಿನಕ್ಕೆ ಹೊಸ-ಹೊಸ ಕಟ್ಟಡಗಳು ತಲೆ ಎತ್ತುತ್ತಿವೆ. ಈ ನಡುವೆ ನೂರಾರು ಹಳೇ ಕಟ್ಟಡಗಳ ಆಯುಷ್ಯ ಮುಗಿದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರೂ ಕೂಡ ಪಾಲಿಕೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಶಿಥಿಲಗೊಂಡ ಕಟ್ಟಡ ತೆರವಿಗೆ ಮುಂದಾಗದ ಪಾಲಿಕೆ: ಸಾರ್ವಜನಿಕರ ಆಕ್ರೋಶ ನಗರದಲ್ಲಿ ಅವಧಿ ಮುಗಿದು ಯಾವ ಸಮಯದಲ್ಲಿ ಬೇಕಾದರೂ ನೆಲಕ್ಕುರುಳಬಹುದಾಂತಹ ಅನೇಕ ಕಟ್ಟಡಗಳಿವೆ. ಆದರೆ, ಶಿಥಿಲಗೊಂಡ ಕಟ್ಟಡಗಳನ್ನು ತೆರವುಗೊಳಿಸಬೇಕಾದ ಪಾಲಿಕೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಕೇವಲ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾದ ಒಂದಿಷ್ಟು ಕಟ್ಟಡಗಳನ್ನು ಮಾತ್ರ ತೆರವು ಮಾಡಲಾಗಿದೆ.
ಕಲಬುರಗಿ ಮಹಾನಗರ ಪಾಲಿಕೆ ಝೋನಲ್ 1, 2 ಮತ್ತು 3 ಭಾಗವಾಗಿ ವಿಂಗಡನೆ ಮಾಡಿಕೊಂಡು ಮೂಲಭೂತ ಸೌಕರ್ಯ ಒದಗಿಸುವ ಕೆಲಸ ಮಾಡುತ್ತಿದೆ. ಮೂರು ಝೋನಲ್ ಸೇರಿ ಕಳೆದ ಸಾಲಿನಲ್ಲಿ 91 ಕಟ್ಟಡಗಳನ್ನು ತೆರವು ಮಾಡಲಾಗಿದೆ. ಇವುಗಳಲ್ಲಿ ಬಹುತೇಕ ಕಟ್ಟಡಗಳನ್ನು ರಸ್ತೆ ಅಗಲೀಕರಣಕ್ಕಾಗಿ ತೆರವು ಮಾಡಲಾಗಿದೆ. ಪಾಲಿಕೆ ಕಣ್ಣಿಗೆ ಶಿಥಿಲಗೊಂಡ ಕಟ್ಟಡವೇ ಕಾಣೋದಿಲ್ವಾ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಈ ಬಗ್ಗೆ ಪಾಲಿಕೆ ಆಯುಕ್ತರನ್ನು ಕೇಳಿದರೆ ಕೊರೊನಾ ನಿರ್ವಹಣೆ ಕಾರಣದಿಂದಾಗಿ ಶಿಥಿಲಗೊಂಡ ಕಟ್ಟಡ ಗುರುತಿಸುವ ಹಾಗೂ ತೆರವು ಕಾರ್ಯ ಮಾಡಿಲ್ಲ. ಇದೀಗ ಇಂತಹ ಕಟ್ಟಡಗಳನ್ನು ಗುರುತಿಸುವ ಕೆಲಸ ನಡೆದಿದೆ. ನಾಗರೀಕರಿಗೆ ತೊಂದರೆಯಾಗುವಂತಹ ಕಟ್ಟಡ ಕಂಡುಬಂದರೆ ತಕ್ಷಣ ನೋಟಿಸ್ ಜಾರಿ ಮಾಡಲಾಗವುದು ಎಂದು ತಿಳಿಸಿದ್ದಾರೆ.