ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಸುಮಾರು ಎರಡು ತಿಂಗಳು ಕಳೆದಿದೆ. ಆದರೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಿಗದಿಯಾಗಿರಲಿಲ್ಲ. ಇದೀಗ ನವೆಂಬರ್ 20ರಂದು ಚುನಾವಣೆ ನಿಗದಿಯಾಗಿದ್ದು, ಅತಂತ್ರ ಪಾಲಿಕೆಯಲ್ಲಿ ರಾಜಕೀಯ ಚಟುವಟಿಕೆ ಬಿರುಸು ಪಡೆದಿದೆ.
55 ವಾರ್ಡ್‌ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದು ಎರಡು ತಿಂಗಳು ಕಳೆದಿದೆ. ಫಲಿತಾಂಶ ಹೊರಬಿದ್ದ ಒಂದೆರೆಡು ವಾರದಲ್ಲಿ ಮೇಯರ್ ಉಪಮೇಯರ್ ಚುನಾಚಣೆ ನಡೆಯಬೇಕಿತ್ತು. ಆದರೆ ಅತಂತ್ರ ಪಾಲಿಕೆ ಗದ್ದುಗೆ ಏರೋದಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಿರುಸಿನ ಪೈಪೋಟಿ ನಡೆದಿದೆ. ಕಲಬುರಗಿ ಮಹಾನಗರ ಪಾಲಿಕೆಯ 55 ವಾರ್ಡ್ಗಳ ಪೈಕಿ ಕಾಂಗ್ರೆಸ್ ನಿಂದ 27 ಸದಸ್ಯರು ಆಯ್ಕೆಯಾಗಿದ್ದರೆ, ಬಿಜೆಪಿಯಿಂದ 23 ಸದಸ್ಯರು ಆಯ್ಕೆಯಾಗಿದ್ದಾರೆ. ಜೆಡಿಎಸ್ನಿಂದ ನಾಲ್ವರು ಸದಸ್ಯರು ಆಯ್ಕೆಯಾಗಿದ್ದು, ಓರ್ವ ಪಕ್ಷೇತರ ಸದಸ್ಯ ಚುನಾವಣೆಯಲ್ಲಿ ಆಯ್ಕೆಯಾಗುವ ಮೂಲಕ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆತಿಲ್ಲ.
ಕಲಬುರಗಿ ಮೇಯರ್-ಉಪಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್..ಅತಂತ್ರ ಪಾಲಿಕೆಗೆ ಜೆಡಿಎಸ್ ಕಿಂಗ್ ಮೇಕರ್ ಹಾಗಾಗಿ ಅತಂತ್ರ ಕಲಬುರಗಿ ಮಹಾನಗರ ಪಾಲಿಕೆಯ ಗದ್ದುಗೆ ಏರೋದಕ್ಕೆ ಜೆಡಿಎಸ್ ಬೆಂಬಲ ಅನಿವಾರ್ಯವಾಗಿದೆ. ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ದಿನಾಂಕ ಫಿಕ್ಸ್ ಆದರೂ ಕೂಡ ಜೆಡಿಎಸ್ ತನ್ನ ಬೆಂಬಲವನ್ನು ಇನ್ನೂ ಪ್ರಕಟಿಸಿಲ್ಲ. ಇತ್ತ ಬಿಜೆಪಿ ಸಹ ಮೇಯರ್ ಸ್ಥಾನ ಅಲಂಕರಿಸಲಿದೆ, ಜೆಡಿಎಸ್ ಸದಸ್ಯರು ನಮಗೆ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಕಲಬುರಗಿ ಬಿಜೆಪಿ ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್ ಹೇಳಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆ ಗದ್ದುಗೆ ಏರಲು 32 ಸಂಖ್ಯಾಬಲವಾಗಿದ್ದು, ಬಿಜೆಪಿಯ 23 ಸದಸ್ಯರು, ಶಾಸಕರು-ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯ, ಪಕ್ಷೇತರ ಸದಸ್ಯ ಸೇರಿ 29 ಮತಗಳಿವೆ. ಇತ್ತ ಕಾಂಗ್ರೆಸ್ ಬಳಿ 27 ಸದಸ್ಯರು ಓರ್ವ ಶಾಸಕ, ರಾಜ್ಯಸಭಾ ಸದಸ್ಯರು ಸೇರಿ 29 ಮತಗಳಿವೆ. ಹಾಗಾಗಿ ಬಹುಮತಕ್ಕಾಗಿ ಎರಡು ಪಕ್ಷಗಳಿಗೆ ಮೂರು ಮತಗಳ ಅವಶ್ಯಕತೆ ಇದೆ. ಬಿಜೆಪಿ ಮತ್ತು ಕಾಂಗ್ರೆಸ್ ಸಂಖ್ಯಾಬಲ ಪಡೆಯಬೇಕಾದರೆ ಜೆಡಿಎಸ್ ಬೆಂಬಲ ಅನಿವಾರ್ಯವಾಗಿದೆ.
ಮೇಯರ್ ಸ್ಥಾನಕ್ಕೆ ಬೇಡಿಕೆ ಇಟ್ಟ ಜೆಡಿಎಸ್ ?
ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಜೆಡಿಎಸ್ ಮೇಯರ್ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದೆ ಎನ್ನಲಾಗ್ತಿದೆ. ಇಂದು ಬೆಂಗಳೂರಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಸದಸ್ಯರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂಬುದರ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ಯುವ ನಾಯಕ ಕೃಷ್ಣಾರೆಡ್ಡಿ ಹೇಳಿದ್ದಾರೆ.
ಜೆಡಿಎಸ್‌ಗೆ ಮೇಯರ್ ಸ್ಥಾನ ಬಿಟ್ಟು ಕೊಡಲು ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳು ಕೂಡ ತಯಾರಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಾಗಿ ಜೆಡಿಎಸ್ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸೋದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಸಿದ್ಧವಾಗಿವೆ. ಆದರೆ ಅಂತಿಮವಾಗಿ ಜೆಡಿಎಸ್ ಯಾರಿಗೆ ಬೆಂಬಲ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಶಿಕಾರಿಪುರ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಯುವಕ ಸಾವು