ಕಲಬುರಗಿ: ಕಲಬುರಗಿ ಜಿಲ್ಲಾಧಿಕಾರಿ ಇಂದು ಪಕ್ಕಾ ಹಳ್ಳಿ ಸೋಗಡಿನ ಬಟ್ಟೆತೊಟ್ಟು ಎತ್ತಿನ ಬಂಡಿಯಲ್ಲಿ ಸವಾರಿ ಮಾಡಿ ಗಮನ ಸೆಳೆದಿದ್ದಾರೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಹಿನ್ನೆಲೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಇಂದು ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೊಂಚೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಗ್ರಾಮಸ್ಥರು ಆತ್ಮೀಯವಾಗಿ ಡಿಸಿಯವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ಡಿಸಿ ಸಾಹೇಬ್ರು ಬಿಳಿ ಅಂಗಿ, ಬಿಳಿ ಪಂಚೆ, ಹಸಿರು ಶಲ್ಯ ಹಾಗು ಕೆಂಪು ರುಮಾಲು ಧರಿಸಿ ಎತ್ತಿನ ಗಾಡಿಯಲ್ಲಿ ಸವಾರಿ ಮಾಡಿದರು. ಬಾಜಾ ಭಜಂತ್ರಿ ಡೋಲು ಮತ್ತಿತರ ವಾದ್ಯಗಳೊಂದಿಗೆ ಊರಿನ ಬೀದಿಯಲ್ಲಿ ಡಿಸಿ ಸಾಹೇಬ್ರನ್ ಮೆರವಣಿಗೆ ಮಾಡಿ ಭವ್ಯವಾಗಿ ಜನ ಸ್ವಾಗತಿಸಿದರು. ಮಹಿಳೆಯರು ಆರತಿ ಬೆಳಗಿ ಗ್ರಾಮದ ಸಂಪ್ರದಾಯ ಮೆರೆದರು.
ಗ್ರಾಮ ವಾಸ್ತವ್ಯ ಹಿನ್ನೆಲೆ ಜಿಲ್ಲಾಧಿಕಾರಿ ಗುರುಕರ್, ಕಂದಾಯ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಅಹವಾಲು, ನೋಂದಣಿ ಕೇಂದ್ರ, ಕೋವಿಡ್ ಲಸಿಕೆ ನೀಡಿಕೆ ಕೇಂದ್ರ, ಆರೋಗ್ಯ ತಪಾಸಣಾ ಶಿಬಿರ, ಕ್ಷಯರೋಗ ನಿಯಂತ್ರಣ ಶಿಬಿರ ಮುಂತಾದವುಗಳನ್ನ ವೀಕ್ಷಿಸಿ ಮಾಹಿತಿ ಪಡೆದರು. ಬಳಿಕ ಗ್ರಾಮಸ್ಥರಿಂದ ರಸ್ತೆ, ಕುಡಿಯುವ ನೀರು ಮುಂತಾದವುಗಳ ಕುರಿತು ಅಹವಾಲು ಸ್ವೀಕರಿಸಿದರು.