ಕಲಬುರಗಿ :ಕಬ್ಬು ಬೆಳೆಯಿರಿ. ನಾವು ಖರೀದಿ ಮಾಡುತ್ತೇವೆ ಅಂತಾ ರೈತರಿಗೆ ಉತ್ತೇಜನ ನೀಡಿದ್ದ ಸಕ್ಕರೆ ಕಾರ್ಖಾನೆ ಈಗ ಕಬ್ಬು ಖರೀದಿಸದೇ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಸಕ್ಕರೆ ಕಾರ್ಖಾನೆ ಚೆಲ್ಲಾಟ : ಬೆಳೆ ಕಳೆದುಕೊಳ್ಳುವ ಆತಂಕದಲ್ಲಿ ರೈತರು ಸಾವಿರಾರು ರೂ. ಖರ್ಚು ಮಾಡಿ ಬೆಳೆದ ಕಬ್ಬು ಜಮೀನಿನಲ್ಲಿಯೇ ತಮ್ಮ ಕಣ್ಣ ಮುಂದೆಯೇ ಒಣಗಿ ಹೋಗುತ್ತಿರುವುದನ್ನು ನೋಡಿ ರೈತರು ಕಂಗಾಲಾಗಿದ್ದಾರೆ. ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಕಡಕೋಳ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯಲ್ಲಿ ಇಂತಹದೊಂದು ಸ್ಥಿತಿ ನಿರ್ಮಾಣವಾಗಿದೆ.
ಸಕ್ಕರೆ ಕಾರ್ಖಾನೆ ಕಾರಣ : ಯಡ್ರಾಮಿ ತಾಲೂಕಿನ ಮಳ್ಳಿಯಲ್ಲಿ 'ಉಗಾರ್ ಶುಗರ್' ಎಂಬ ಸಕ್ಕರೆ ಕಾರ್ಖಾನೆಯಿದೆ. ಕಾರ್ಖಾನೆಯವರು ನಿಮ್ಮ ಕಬ್ಬು ಖರೀದಿ ಜವಾಬ್ದಾರಿ ನಮ್ಮದು, ನೀವು ಕಬ್ಬು ಬೆಳೆಯಿರಿ ಎಂದು ಹೇಳಿದ್ದರಂತೆ. ಇದನ್ನೂ ನಂಬಿದ ಕಡಕೋಳ ಸೇರಿದಂತೆ ಅನೇಕ ಗ್ರಾಮಗಳ ಸಾವಿರಾರು ರೈತರು ತಮ್ಮ ಜಮೀನಿನಲ್ಲಿ ಕಬ್ಬು ಬೆಳದಿದ್ದಾರಂತೆ.
ಕಬ್ಬು ಬೆಳೆಯಲು ರೈತರು ಸಾವಿರಾರು ರೂ. ಖರ್ಚು ಮಾಡಿದ್ದಾರೆ. ಈ ಬಾರಿ ಉತ್ತಮ ಇಳುವರಿ ಕೂಡ ಬಂದಿದೆ. ಹೀಗಾಗಿ, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದರು. ಆದ್ರೆ, ರೈತರ ನಿರೀಕ್ಷೆಯನ್ನು ಸಕ್ಕರೆ ಕಾರ್ಖಾನೆಗಳು ತಲೆ ಕೆಳಗೆ ಮಾಡಿವೆ. ಕಳೆದ ಡಿಸೆಂಬರ್ ತಿಂಗಳಲ್ಲಿಯೇ ಕಬ್ಬು ಕಟಾವು ಆಗಬೇಕಿತ್ತು.
ಆದ್ರೆ, ಜನವರಿ ತಿಂಗಳು ಮುಗಿದರೂ ಕೂಡ ಕಬ್ಬು ಕಟಾವಾಗಿಲ್ಲ. ಹೀಗಾಗಿ, ಜಮೀನಿನಲ್ಲಿಯೇ ಲಕ್ಷಾಂತರ ಮೌಲ್ಯದ ಕಬ್ಬು ಒಣಗಿ ಹೋಗುತ್ತಿದೆ. ಡಿಸೆಂಬರ್ ತಿಂಗಳಲ್ಲಿಯೇ ಕಬ್ಬು ಕಟಾವು ಆಗಿದ್ದರೆ ಪ್ರತಿ ಎಕರೆಗೆ 40 ರಿಂದ 50 ಟನ್ ಆಗುತ್ತಿತ್ತು. ಆದ್ರೆ, ಈಗ ಕಬ್ಬು ಒಣಗುತ್ತಿರುವುದರಿಂದ ಪ್ರತಿ ಎಕರೆಗೆ 20 ರಿಂದ 25 ಟನ್ ಮಾತ್ರ ಇಳುವರಿ ಬರಲಿದೆ.
ಬಂದಷ್ಟು ಬರಲಿ, ಮೊದಲು ತಮ್ಮ ಜಮೀನಿನಲ್ಲಿನ ಕಬ್ಬು ಕಟಾವು ಮಾಡಿಕೊಂಡು ಹೋಗಿ ಅಂತಾ ಸಕ್ಕರೆ ಕಾರ್ಖಾನೆಯವರಿಗೆ ಮನವಿ ಮಾಡಿದ್ರೂ ಕೂಡ ಅವರು ಬರುತ್ತಿಲ್ಲ. ಹೀಗಾಗಿ, ಲಕ್ಷಾಂತರ ಮೌಲ್ಯದ ಕಬ್ಬು ಕಟಾವಾಗದೇ ರೈತರು ಆತಂಕದಲ್ಲಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇದಕ್ಕೆಲ್ಲ ಸಕ್ಕರೆ ಕಾರ್ಖಾನೆಯೇ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಕಬ್ಬು ನುರಿಯುವುದನ್ನು ನಿಲ್ಲಿಸುವುದಾಗಿ ಕಾರ್ಖಾನೆ ಹೇಳುತ್ತಿದೆ. ಈಗಾಗಲೇ ಒಣಗುತ್ತಿರುವ ಕಬ್ಬು, ಇನ್ನೊಂದು ವಾರ ಕಳೆದ್ರೆ ಸಂಪೂರ್ಣವಾಗಿ ಹಾಳಾಗಲಿದೆ. ಹೀಗಾಗಿ, ಕಬ್ಬು ಕಟಾವು ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಕಬ್ಬು ಕಟಾವು ಮಾಡುವಂತೆ ಕೇಳಿದರೆ ಕಾರ್ಖಾನೆಯವರು ಕಾರ್ಮಿಕರ ಕೊರತೆ ನೆಪ ಹೇಳುತ್ತಿದ್ದಾರೆ. ಹೀಗಾದ್ರೆ, ನಮ್ಮ ಗತಿ ಏನು ಅನ್ನೋ ಆತಂಕದಲ್ಲಿ ರೈತರಿದ್ದಾರೆ. ಇನ್ನಾದ್ರೂ ಕುಂಟು ನೆಪ ಹೇಳುವುದನ್ನು ಬಿಟ್ಟು ಒಣಗುತ್ತಿರುವ ಕಬ್ಬನ್ನು ತಕ್ಷಣ ಕಟಾವು ಮಾಡಬೇಕಿದೆ.