ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್ನಿಂದ ನೆಲ ಕಚ್ಚಿದ್ದ ವ್ಯಾಪಾರ-ವಹಿವಾಟುಗಳು ಕ್ರಮೇಣವಾಗಿ ಯಥಾಸ್ಥಿತಿಗೆ ಮರಳುತ್ತಿವೆ. ಆದ್ರೆ ವ್ಯಾಪಾರಿಗಳು ಮಾತ್ರ ತಮ್ಮ ಅಂಗಡಿಗಳ ಟ್ರೇಡ್ ಲೈಸೆನ್ಸ್ ನವೀಕರಣ ಅಥವಾ ಹೊಸ ಟ್ರೇಡ್ ಲೈಸೆನ್ಸ್ಗಳಿಗೆ ಮುಂದೆ ಬರದಿರುವುದು ಮಹಾನಗರ ಪಾಲಿಕೆಗೆ ತೆಲೆನೋವಾಗಿ ಪರಿಣಮಿಸಿದೆ. ಆನ್ಲೈನ್ ಪ್ರಕ್ರಿಯೆ ಹಿನ್ನೆಲೆ ಕಟ್ಟಡಗಳ ನಿರ್ಮಾಣ ಅನುಮತಿಗೂ ಹಿನ್ನಡೆಯಾಗುತ್ತಿದೆ.
ಕಲಬುರಗಿ ಮಹಾನಗರ ಪಾಲಿಕೆಗೆ ಪೆಟ್ಟು ಕೊಟ್ಟ ಕೊರೊನಾ : ಅಂಗಡಿ ಲೈಸನ್ಸ್ ಪಡೆಯಲು ಬರ್ತಿಲ್ಲ ವ್ಯಾಪಾರಿಗಳು ಟ್ರೇಡ್ ಲೈಸೆನ್ಸ್, ಕಟ್ಟಡ ಪರವಾನಿಗೆ, ನಿವೇಶನ ಸೇರಿ ಕೆಲವೊಂದು ಸಾರ್ವಜನಿಕ ಆಸ್ತಿ ಸೇವಾ ಶುಲ್ಕವನ್ನು ನೆಚ್ಚಿಕೊಂಡಿರುವ ಕಲಬುರಗಿ ಮಾಹಾನಗರ ಪಾಲಿಕೆಗೆ ಕೋವಿಡ್ ಮಹಾಮಾರಿ ಕೊಡಲಿ ಪೆಟ್ಟು ಹಾಕಿದೆ. ವಿಶೇಷವಾಗಿ ಟ್ರೇಡ್ ಲೈಸನ್ಸ್ ನವೀಕರಣ ಹಾಗೂ ಹೊಸ ಅಂಗಡಿಗಳ ಪರವಾನಿಗೆಗೆ ವ್ಯಾಪಾರಿಗಳು ಮುಂದೆ ಬರದಿರುವ ಕಾರಣ ಸ್ವತಃ ಪಾಲಿಕೆ ಅಧಿಕಾರಿಗಳೇ ಅಂಗಡಿಗಳ ಬಾಗಿಲಿಗೆ ಹೋಗುವಂತಾಗಿದೆ.
ಟ್ರೇಡ್ ಲೈಸೆನ್ಸ್ ತೆಗೆದುಕೊಳ್ಳುವುದು ಅತಿಸರಳ, ಕಡಿಮೆ ದಾಖಲಾತಿಗಳ ಅಗತ್ಯವಿದೆ. ಫೀಸ್ ಕೂಡಾ ಕಡಿಮೆ ಇದೆ. 700 ರೂಪಾಯಿಗಳಿಂದ ಫೀಸ್ ಇದೆ. 300 ಸ್ಕ್ವಯರ್ ಫೀಟ್, 300 ರಿಂದ 500-1000, ಹಾಗೂ ಸಾವಿರದಿಂದ ಐದು ಸಾವಿರದವರೆಗೆ ಮತ್ತು ಮೇಲ್ಪಟ್ಟು ಸ್ಥಳಾವಕಾಶದ ಅಂಗಡಿಗಳನ್ನು ವಿಂಗಡಿಸಿಕೊಂಡು ಆಯಕಟ್ಟಿನ ಸೈಜ್ ಆಧಾರವಾಗಿಟ್ಟುಕೊಂಡು ಶುಲ್ಕ ನಿಗದಿ ಮಾಡಲಾಗಿದೆ. ಪ್ರತಿಯೊಂದು ಅಂಗಡಿಗಳಿಗೆ ಪಾಲಿಕೆ ಅನುಮತಿ ತೆಗೆದುಕೊಳ್ಳಿ ಎಂದು ಅಧಿಕಾರಿಗಳು ವ್ಯಾಪಾರಸ್ಥರಿಗೆ ಮನವಿ ಮಾಡುತ್ತಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ 16 ಸಾವಿರ ಅಂಗಡಿಗಳು ಇವೆ. ಇದರಲ್ಲಿ ಕೇವಲ ಶೇ.50 ರಷ್ಟು ವ್ಯಾಪಾರಿಗಳು ಪಾಲಿಕೆ ಅನುಮತಿ ಪಡೆದಿದ್ದಾರೆ. ದೊಡ್ಡ ದೊಡ್ಡ ವ್ಯಾಪಾರಿಗಳು ಹಾಗೂ ಬ್ಯಾಂಕ್ ಸಾಲ ಪಡೆಯುವ ಅಂಗಡಿಗಳಿಗೆ ಮಾತ್ರ ಪಾಲಿಕೆ ಅನುಮತಿ ಪಡೆಯಲಾಗಿದೆ. ಇನ್ನುಳಿದ ಅರ್ಧದಷ್ಟು ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಪಾಲಿಕೆy ಅನುಮತಿ ಪಡೆದಿಲ್ಲ. ಮಾರ್ಚ್ ಏಪ್ರಿಲ್ ತಿಂಗಳಿನಲ್ಲಿ ಲೈಸೆನ್ಸ್ಗಳನ್ನು ನವೀಕರಣ ಮಾಡಿಕೊಳ್ಳಬೇಕು. ಕೋವಿಡ್ ಆತಂಕದಿಂದ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಲಾಕ್ಡೌನ್ ಹೇರಲಾಗಿತ್ತು. ಇದರಿಂದಾಗಿ ನವೀಕರಣ ಸಂಪೂರ್ಣ ಸ್ಥಗಿತಗೊಂಡಿದೆ. ಇದೀಗ ಕ್ರಮೇಣವಾಗಿ ವ್ಯಾಪಾರ ವಹಿವಾಟು ವೃದ್ಧಿಯಾಗುತ್ತಿದ್ದರೂ ವ್ಯಾಪಾರಸ್ಥರು ಮಾತ್ರ ಲೈಸನ್ಸ್ ನವೀಕರಣ ಹಾಗೂ ಹೊಸ ಲೈಸನ್ಸ್ ಪಡೆಯಲು ಮುಂದೆ ಬರುತ್ತಿಲ್ಲ. ಇದರಿಂದಾಗಿ ಪಾಲಿಕೆ ನಷ್ಟದತ್ತ ಮುಖ ಮಾಡುತ್ತಿದೆ.