ಕಲಬುರಗಿ: ಜಿಲ್ಲೆಯ ಘತ್ತರಗಿಯಲ್ಲಿ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ವಿರಕ್ತ ಮಠದ ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಂಗ್ರಹವಾದ ಲಕ್ಷಾಂತರ ರೂಪಾಯಿ ದೇಣಿಗೆಯಿಂದ ಜಮೀನು ಖರೀದಿಸಿ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿದೆ. ಈ ಮೂಲಕ ಶಿಕ್ಷಣದ ಅಕ್ಷರ ಜೋಳಿಗೆ ಮಕ್ಕಳ ಭವಿಷ್ಯವನ್ನು ಬೆಳಗಿಸುತ್ತಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮದಲ್ಲಿ ನೂತನ ಸರ್ಕಾರಿ ಶಾಲಾ ಕಟ್ಟಡ ನಿರ್ಮಿಸಬೇಕೆಂದು ಗ್ರಾಮಸ್ಥರೆಲ್ಲಾ ಸೇರಿಕೊಂಡು ಐದು ಎಕರೆ ಜಮೀನು ಖರೀದಿಸಿ, ಎರಡೂವರೆ ಎಕರೆ ಶಿಕ್ಷಣ ಇಲಾಖೆಗೆ ಹಾಗೂ ಇನ್ನೆರಡುವರೆ ಎಕರೆ ಜಮೀನು ಇತರೆ ಸರ್ಕಾರಿ ಕಚೇರಿಗಳ ಕಟ್ಟಡಕ್ಕಾಗಿ ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ. ಕೊಪ್ಪಳದ ಗವಿಮಠದ ಸ್ವಾಮೀಜಿ, ಸೊನ್ನ ವಿರಕ್ತ ಮಠದ ಶಿವಾನಂದ ಸ್ವಾಮೀಜಿ ಸಮ್ಮುಖದಲ್ಲಿ ಗ್ರಾಮಸ್ಥರು ಡಿಡಿಪಿಐ ಸಕ್ರಪ್ಪ ಗೌಡ ಅವರಿಗೆ ಶಾಲೆ ಕಟ್ಟಡಕ್ಕಾಗಿ ಜಮೀನು ಒಪ್ಪಿಸಿದರು.
ಘತ್ತರಗಿ ಗ್ರಾಮದಲ್ಲಿರುವ ಸರ್ಕಾರಿ ಶಾಲಾ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಮಕ್ಕಳು ಜೀವ ಭಯದಲ್ಲಿಯೇ ಪಾಠ ಕಲಿಯುವಂತಾಗಿತ್ತು. ಅಲ್ಲದೇ, ಈಗಿರುವ ಸರ್ಕಾರಿ ಶಾಲೆ ಧಾರ್ಮಿಕ ದತ್ತಿ ಇಲಾಖೆ ಜಾಗದಲ್ಲಿದ್ದು, ನೂತನ ಕಟ್ಟಡ ಕಾಮಗಾರಿಗೆ ಕಾನೂನಿನಲ್ಲಿ ಅವಕಾಶವಿರಲಿಲ್ಲ. ಹೀಗಾಗಿ, ನೂತನ ಸರ್ಕಾರಿ ಶಾಲೆ ಕಟ್ಟಡಕ್ಕಾಗಿ ಗ್ರಾಮಸ್ಥರೆಲ್ಲಾ ಸೇರಿಕೊಂಡು ಜಮೀನು ಖರೀದಿಗೆ ಹಣ ಸಂಗ್ರಹಿಸಲು ಅಕ್ಷರ ಜೋಳಿಗೆ ಆರಂಭಿಸಿದ್ದರು.