ಕಲಬುರಗಿ: ಗುಲ್ಬರ್ಗಾ ವಿಧಾನಸಭಾ ಕ್ಷೇತ್ರವನ್ನು 2008ರಲ್ಲಿ ಒಡೆದು ದಕ್ಷಿಣ ಹಾಗೂ ಉತ್ತರ ಕ್ಷೇತ್ರವಾಗಿ ಪುನರ್ವಿಂಗಡಣೆ ಮಾಡಲಾಯಿತು. ಅಂದಿನಿಂದ ಹೊಸದಾಗಿ ಕಲಬುರಗಿ ದಕ್ಷಿಣ ಮತಕ್ಷೇತ್ರ ಜನ್ಮ ತಾಳಿತು. ವಿಂಗಡಣೆಯ ಬಳಿಕ ದಕ್ಷಿಣ ಕ್ಷೇತ್ರ ರೇವೂರ ಕುಟುಂಬದ ಹಿಡಿತದಲ್ಲಿದೆ. ಹ್ಯಾಟ್ರಿಕ್ ಬಾರಿಸಲು ಮತ್ತೊಮ್ಮೆ ಬಿಜೆಪಿಯಿಂದ ದತ್ತಾತ್ರೇಯ ಪಾಟೀಲ್ ರೇವೂರ ಕಣಕ್ಕಿಳಿದಿದ್ದಾರೆ. ರೇವೂರ ಕುಟುಂಬದಿಂದ ಕ್ಷೇತ್ರ ಕಸಿದುಕೊಂಡು ತಮ್ಮ ಮಡಿಲಿಗೆ ಹಾಕಿಕೊಳ್ಳಲು ಕೈ ಪಕ್ಷವು ಅಲ್ಲಮ ಪ್ರಭು ಪಾಟೀಲ್ ಅವರನ್ನು ಕಣಕ್ಕಿಳಿಸಿದೆ. ಜೆಡಿಎಸ್ ಅಧಿಕೃತ ಅಭ್ಯರ್ಥಿಯ ಹೆಸರು ಇನ್ನೂ ಘೋಷಣೆ ಮಾಡದೆ ಕಾಯುವ ತಂತ್ರಗಾರಿಕೆ ಅನುಸರಿಸುತ್ತಿದೆ. ಆಮ್ ಆದ್ಮಿ, ಕೆಆರ್‌ಎಸ್ ಸೇರಿದಂತೆ ಇತರೆ ರಾಜಕೀಯ ಪಕ್ಷಗಳೂ ಸಹ ತಮ್ಮ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿವೆ.
ಎರಡು ಕುಟುಂಬಗಳ ನಡುವೆ ಪೈಪೋಟ:ತೊಗರಿ ಕಣಜ, ಬಿಸಿಲ ನಾಡು, ಅಂದಿನ ಗುಲಬರ್ಗವೇ ಇಂದಿನ ಕಲಬುರಗಿಯ ದಕ್ಷಿಣ ವಿಧಾನಸಭಾ ಕ್ಷೇತ್ರ. ಕ್ಷೇತ್ರದಲ್ಲಿ ಪಾರುಪತ್ಯ ಸಾಧಿಸಲು ಬಿಜೆಪಿ ನಾಯಕ ದಿ. ಚಂದ್ರಶೇಖರ ಪಾಟೀಲ್ ಹಾಗೂ ಕಾಂಗ್ರೆಸ್ ನಾಯಕ ದಿ. ಖಮರುಲ್ ಇಸ್ಲಾಂ ಮಧ್ಯೆ ಭಾರಿ ಪೈಪೋಟಿ ನಡೀತಿತ್ತು. 2008ರ ಬಳಿಕ ಕ್ಷೇತ್ರ ವಿಂಗಡಣೆಯಲ್ಲಿ ಕಲಬುರಗಿ ಉತ್ತರ ಮತ್ತು ದಕ್ಷಿಣ ಕ್ಷೇತ್ರ ರಚಣೆಯಿಂದ ಇಬ್ಬರು ನಾಯಕರಿಗೆ ವರ ಸಿಕ್ಕಂತಾಯಿತು. ಮುಸ್ಲಿಂ ಸಮುದಾಯ ಹೆಚ್ಚಿರುವ ಉತ್ತರ ಕ್ಷೇತ್ರದಲ್ಲಿ ಖಮರುಲ್ ಇಸ್ಲಾಂ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಚಂದ್ರಶೇಖರ ಪಾಟೀಲ್ ರೇವೂರ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಅದು ಇಂದಿಗೂ ಮುಂದುವರೆದುಕೊಂಡು ಬಂದಿದೆ.
2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಚಂದ್ರಶೇಖರ್ ಪಾಟೀಲ್ ರೇವೂರ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಎಚ್‌ಕೆಇ ಸೊಸೈಟಿಯ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ ಅವರನ್ನು ಅಖಾಡಕ್ಕಿಳಿಸಿತ್ತು. ಭೀಮಳ್ಳಿ ಅವರನ್ನು 14,290 ಅಂತರದಿಂದ ಸೋಲಿಸಿದ ರೇವೂರ ಗೆಲುವು ಸಾಧಿಸಿದ್ದರು. ಒಂದೊಮ್ಮೆ ಕಲಬುರಗಿಯ ಎನ್.ವಿ.ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಯಡಿಯುರಪ್ಪ ವಿರುದ್ಧ ಚಂದ್ರಶೇಖರ ಪಾಟೀಲ್ ಗುಟುರು ಹಾಕಿದ್ದರು. ರಾಜ್ಯಮಟ್ಟದ ನಾಯಕನಿಗೆ ರೇವೂರ ಗುಡುಗು ಮಾಡಿದ್ದು ಇಡೀ ರಾಜ್ಯವ್ಯಾಪಿ ಚರ್ಚೆಗೆ ಕಾರಣವಾಗಿತ್ತು.
2010ರಲ್ಲಿ ಹಾಲಿ ಶಾಸಕರಾಗಿದ್ದ ಚಂದ್ರಶೇಖರ ಪಾಟೀಲ್ ರೇವೂರ ಹೃದಯಾಘಾತಕ್ಕೆ ಬಲಿಯಾಗಿ ಇಹಲೋಕ ತ್ಯಜಿಸಿದ್ದರು. ಅವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು. ಉಪ ಚುನಾವಣೆಯಲ್ಲಿ ರೇವೂರ್ ಕುಟುಂಬಕ್ಕೆ ಟಿಕೆಟ್ ಕೊಡಲು ಕೇಸರಿ ಪಕ್ಷ ನಿರಾಕರಿಸಿತು. ಶಶೀಲ್ ನಮೋಶಿ ಎನ್ನುವವರಿಗೆ ಟಿಕೆಟ್ ನೀಡಲಾಗಿತ್ತು. ಆಗ ಹೆಚ್.ಡಿ.ಕುಮಾರಸ್ವಾಮಿ ಅವರು ರೇವೂರ ಕುಟುಂಬದ ಕೈ ಹಿಡಿದರು. ಚಂದ್ರಶೇಖರ ಪಾಟೀಲ್ ರೇವೂರ ಪತ್ನಿ ಅರುಣಾ ಸಿ.ಪಾಟೀಲ್ ಜಾತ್ಯತೀತ ಜನತಾ ದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ 39,430 ಮತಗಳನ್ನು ಗಳಿಸಿ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರನ್ನು ಸೋಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ಅಜಯ್ ಸಿಂಗ್ ಮೂರನೇ ಸ್ಥಾನದಲ್ಲಿದ್ದರು. ಚಂದ್ರಶೇಖರ ಪಾಟೀಲ್ ರೇವೂರ ನಿಧನದಿಂದ ಅನುಕಂಪದ ಮೇಲೆ ಮತ ಕೇಳಿದಾಗ ಕ್ಷೇತ್ರದ ಮತದಾರರು ರೇವೂರ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದನ್ನು ಇಲ್ಲಿ ಸ್ಮರಿಸಬಹುದು.
2013ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ರೇವೂರ ಕುಟುಂಬ ಮರಳಿ ಬಿಜೆಪಿಗೆ ಸೇರಿತು. ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಬಿಜೆಪಿ ಟಿಕೆಟ್ ಮಿಸ್ ಆಗಿದ್ದರಿಂದ ನಮೋಶಿ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ ಪಕ್ಷ ಮಾಜಿ ಸಿಎಂ ವೀರೇಂದ್ರ ಪಾಟೀಲ್ ಪುತ್ರ ಕೈಲಾಶ್ ವಿ.ಪಾಟೀಲರನ್ನು ಕಣಕ್ಕಿಳಿಸಿತ್ತು. ಆ ವರ್ಷದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ದತ್ತಾತ್ರೇಯ ಪಾಟೀಲ್ ರೇವೂರ 36,850 ಮತಗಳನ್ನು ಪಡೆದು, ಜೆಡಿಎಸ್ ಅಭ್ಯರ್ಥಿ ನಮೋಶಿ ಅವರನ್ನು 9,970 ಮತಗಳ ಅಂತರದಿಂದ ಸೋಲಿಸಿ ಜಯಶಾಲಿ ಆಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ಕೈಲಾಶ್ ವಿ.ಪಾಟೀಲ್ 22,074 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
2018ರ ಚುನಾವಣೆಯಲ್ಲಿಯೂ ಕಮಲ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದ ದತ್ತಾತ್ತೇಯ ಪಾಟೀಲ್ ರೇವೂರ ಎರಡನೇ ಬಾರಿಗೆ ಜಯಭೇರಿ ಬಾರಿಸಿದರು. ಕೈಪಕ್ಷದಿಂದ ಕಣಕ್ಕಿಳಿದಿದ್ದ ಅಲ್ಲಮಪ್ರಭು ಪಾಟೀಲ್ ಬಿರುಸಿನ ಪೈಪೋಟಿ ನೀಡಿದ್ದರು. ರೇವೂರ್ 64,788 ಮತಗಳನ್ನು ಪಡೆದಿದ್ದರೆ, ಅಲ್ಲಮಪ್ರಭು ಪಾಟೀಲ್ 59,357 ಮತಗಳು ಪಡೆದಿದ್ದರು. 5,431 ಮತಗಳ ಅಂತರದಿಂದ ಅಲ್ಲಮಪ್ರಭು ಪಾಟೀಲ್ ಅವರನ್ನು ದತ್ತಾತ್ರೇಯ ಪಾಟೀಲ್ ರೇವೂರ ಪರಾಭವಗೊಳಿಸಿದ್ದರು.
ಕ್ಷೇತ್ರ ವಿಂಗಡಣೆಯಾದ ಬಳಿಕ 2008ರಿಂದ ಸತತ ಚಂದ್ರಶೇಖರ್ ಪಾಟೀಲ್ ರೇವೂರ್ ಕುಟುಂಬಸ್ಥರ ವಶದಲ್ಲಿ ದಕ್ಷಿಣ ಕ್ಷೇತ್ರವಿದೆ. 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮೂರನೇ ಬಾರಿಗೆ ಗೆದ್ದು ಹ್ಯಾಟ್ರಿಕ್ ಬಾರಿಸಲು ಹಾಲಿ ಶಾಸಕ ದತ್ತಾತ್ರೇಯ ಪಾಟೀಲ್ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿಗಳ ಪಟ್ಟಿ ದೊಡ್ಡದಾಗಿತ್ತು. ಆದ್ರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಲ್ಲಿನ ವಾಸ್ತವದ ಬಗ್ಗೆ ಅರಿವಿರುವ ಕಾರಣ 2018ರ ಚುನಾವಣೆಯಲ್ಲಿ ಕಠಿಣ ಪೈಪೋಟಿ ನೀಡಿದ ಅಲ್ಲಮಪ್ರಭು ಪಾಟೀಲ್ ಅವರಿಗೆ ಟಿಕೆಟ್ ನೀಡಿದ್ದಾರೆ.