ಕಲಬುರಗಿ:ಹೋಳಿ ಹುಣ್ಣಿಮೆ ದಿನ ನಡೆದ ಇಲ್ಲಿನ ಬಾಪುನಗರದ ರೌಡಿಶೀಟರ್ ವೀರತಾ ಉಪಾಧ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ತೌಸೀಫ್ ಶೇಖ್ (24), ಅಂಬರೀಶ್ ಮಳಖೇಡ (28) ಹಾಗೂ ಜೈಭೀಮ ಗಣಜಲಖೇಡ (26) ಬಂಧಿತ ಆರೋಪಿಗಳು. ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಮಾರ್ಚ್ 29ರಂದು ಸಾಯಂಕಾಲ 4:30ರ ಸುಮಾರಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ಎದುರುಗಡೆ ರಸ್ತೆ ಬಳಿ ಬಾಪುನಗರ ಬಡಾವಣೆಯ ವೀರತಾ ಉಪಾಧ್ಯ (24) ಕೊಲೆ ನಡೆದಿತ್ತು. ಲಾಲ್ಯಾ @ ಪ್ರಸಾದ, ವಿಶಾಲ ನವರಂಗ, ಸತೀಶ @ ಗುಂಡು ಫರತಾಬಾದ, ಬಾಂಬೆ ಸಂಜ್ಯಾ, ತೌಸೀಫ್ ಇತರರು ಸೇರಿ ಈತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಬಗ್ಗೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.