ಕಲಬುರಗಿ: ಕಲಬುರಗಿ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಸಹ ಪ್ರಾಧ್ಯಾಪಕನ ಮೇಲಿನ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಹಂಗಾಮಿ ಕುಲಪತಿ ಪ್ರೊ. ಎಸ್.ಪಿ. ಮೇಲಕೇರಿಯನ್ನು ಅಮಾನತು ಮಾಡಿ ಕುಲಸಚಿವರು ಆದೇಶ ಹೊರಡಿಸಿದ್ದಾರೆ.
ಆಗಷ್ಟ್ 18 ರಂದು ಈ ಘಟನೆ ನಡೆದಿತ್ತು. ಈ ಕುರಿತು ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಇದೀಗ ಕುಲಸಚಿವರಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಪ್ರೊ. ಎಸ್.ಪಿ. ಮೇಲಕೇರಿ ಸಂಬಂಧಿಯೊಬ್ಬರು ಕಲಬುರಗಿ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದಲ್ಲಿ ಎಂ.ಫಿಲ್ ಮಾಡುತ್ತಿದ್ದರು. ಪೂರ್ಣಾವಧಿ ಎಂ.ಫಿಲ್ ಮಾಡುವ ಜೊತೆಗೆ ಬೇರೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗೆ ಶಿಷ್ಯವೇತನ ಮಂಜೂರಿಗೆ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಜಿ.ಎಂ. ವಿದ್ಯಾಸಾಗರ್ ಒಪ್ಪಲಿಲ್ಲ ಎನ್ನಲಾಗ್ತಿದೆ. ಇದರಿಂದ ಕುಪಿತಗೊಂಡ ಪ್ರೊ. ಮೇಲಕೇರಿ ಸಸ್ಯಶಾಸ್ತ್ರ ವಿಭಾಗಕ್ಕೆ ತೆರಳಿ, ಮುಖ್ಯಸ್ಥ ಪ್ರೊ. ಜಿ.ಎಂ. ವಿದ್ಯಾಸಾಗರ್ ಮೇಲೆ ಹಲ್ಲೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.