ಕಲಬುರಗಿ: ಶಾಲೆಗೆ ಹೊರಟ ಬಾಲಕನನ್ನು ಮನೆ ಎದುರಿನಿಂದಲೇ ಕಿಡ್ನಾಪ್ ಮಾಡಿದ ಪ್ರಕರಣವೊಂದನ್ನು ಪೊಲೀಸರು ಸಿನಿಮಾ ಸ್ಟೈಲ್‌ಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗ್ಗೆ 8 ಗಂಟೆಗೆ ಅಪಹರಣವಾಗಿದ್ದ ಬಾಲಕನನ್ನು ಪೊಲೀಸರು ಸಂಜೆ 4 ಗಂಟೆ ವೇಳೆಯೊಳಗೆ ರಕ್ಷಣೆ ಮಾಡಿದ್ದಾರೆ. ಅಪಹರಣವಾಗಿರುವ ವಿಷಯ ತಿಳಿಯುತ್ತಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ರಕ್ಷಣೆ ಮಾಡಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಶಾಲೆಗೆ ಹೋಗುತ್ತಿದ್ದ ಬಾಲಕ ಅಪಹರಣ: ಕಲಬುರಗಿ ನಗರದ ಸಿದ್ದೇಶ್ವರ ಕಾಲೋನಿ ನಿವಾಸಿ ಗುರುನಾಥ್ ರಾಠೋಡ್ ಎಂಬುವರ ಹತ್ತು ವರ್ಷದ ಮಗ ಎಂದಿನಂತೆ 8 ಗಂಟೆ ಸುಮಾರಿಗೆ ಶಾಲೆಗೆ ಹೋಗಲು ಬಸ್ಗಾಗಿ ಮನೆಯ ಗೇಟ್ ಬಳಿ ಕಾಯುತ್ತಿದ್ದ. ಈ ವೇಳೆ ದುಷ್ಕರ್ಮಿಗಳು ಇಎಸ್ಐ ಆಸ್ಪತ್ರೆಯ ವಿಳಾಸ ಕೇಳುವ ನೇಪದಲ್ಲಿ ಮಾತನಾಡಿಸಿ ಆಟೋದಲ್ಲಿ ಅಪಹರಿಸಿಕೊಂಡು ಹೋಗಿದ್ದರು.
ದೊಡ್ಡ ಮೊತ್ತಕ್ಕೆ ಬೇಡಿಕೆಯಿಟ್ಟ ಅಪಹರಣಕಾರರು: ಕಮಲಾಪುರ ತಾಲೂಕಿನ ನಾಗೂರು ಗ್ರಾಮದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಗುರುನಾಥ ಆರ್ಥಿಕವಾಗಿ ಸದೃಡವಾಗಿದ್ದಾರೆ. ಇವರಿಗೆ ಮೂರು ಜನ ಮಕ್ಕಳಿದ್ದು, ಹಿರಿಯ ಮಗ ಸುದರ್ಶನ ನಗರದ ಖಾಸಗಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾನೆ. ಗುರುನಾಥ ಕುಟುಂಬದವರ ಬಗ್ಗೆ ಮಾಹಿತಿ ತಿಳಿದುಕೊಂಡೇ ದುಷ್ಕರ್ಮಿಗಳು ಅಪಹರಿಸಿದ್ದಾರೆ. ಗುರುನಾಥಗೆ ಕರೆ ಮಾಡಿ ಹತ್ತು ಲಕ್ಷ ಹಣ ತಯಾರಿ ಮಾಡಿಕೋ.. ಒಂದು ಗಂಟೆ ನಂತರ ಮತ್ತೆ ಕರೆ ಮಾಡ್ತಿನಿ.. ಪೊಲೀಸರಿಗೆ ಹೇಳಿದರೆ ನಿನ್ನ ಮಗನ ಹೆಣ ನೋಡಬೇಕಾಗುತ್ತೆ ಎಂದು ಸಿನಿಮೀಯ ರೀತಿಯಲ್ಲಿ ಬೆದರಿಕೆ ಹಾಕಿದ್ದಾರೆ.
ಪೊಲೀಸರಿಗೆ ಮೊರೆ ಹೋದ ಬಾಲಕನ ತಂದೆ:ಮಗನ ಅಪಹರಣದಿಂದ ಗೊಂದಲಕ್ಕೆ ಸಿಲುಕಿದ ಗುರುನಾಥ ಹಾಗೂ ಕುಟುಂಬಸ್ಥರು ದಿಕ್ಕು ತೋಚದೇ ಕೊನೆಗೆ ವಿಶ್ವವಿದ್ಯಾಲಯ ಠಾಣೆಯ ಇನ್ಸ್ಪೆಕ್ಟರ್ ಅರುಣ್ಕುಮಾರ್ ಮುರಗುಡಿ ಅವರ ಗಮನಕ್ಕೆ ತಂದಿದ್ದಾರೆ. ಅರುಣ ಕುಮಾರ್ ತಡಮಾಡದೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಮ್ಮ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದರು. ಸಿವಿಲ್ ಡ್ರೆಸ್ನಲ್ಲಿ ಅರುಣಕುಮಾರ ಮತ್ತು ಪೊಲೀಸ್ ಸಿಬ್ಬಂದಿ ಖಾಸಗಿ ವಾಹನಗಳಲ್ಲಿ ಇಡೀ ಕಲಬುರಗಿ ನಗರವನ್ನು ಒಂದು ರೌಂಡ್ ಹಾಕಿದರು.
ಪದೇ ಪದೆ ಸ್ಥಳ ಬದಲಿಸುತ್ತಿದ್ದ ಕಿಡ್ನ್ಯಾಪರ್ಸ್:ಬಾಲಕನ ತಂದೆಯ ಜೊತೆ ಸಂಪರ್ಕದಲ್ಲಿದ್ದ ಖಾಕಿ ಪಡೆ ಕಿಡ್ನಾಪರ್ಸ್ ಕರೆಗಾಗಿ ಕಾಯುತ್ತಿದ್ದರು. ಕರೆ ಬರುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಗುರುನಾಥ ಅವರನ್ನು ಮುಂದೆ ಬಿಟ್ಟು ಕಾರ್ಯಾಚರಣೆ ಆರಂಭಿಸಿದ್ದರು. ಮೊದಲಿಗೆ ಬುದ್ದವಿಹಾರ ಕ್ರಾಸ್ ಬರುವಂತೆ ಹೇಳಿದಾಗ ಗುರುನಾಥ ಅಲ್ಲಿಗೆ ಹೋಗಿದ್ದಾರೆ. ನಂತರ ಅಲ್ಲಿ ಬೇಡ, ಮುಂದೆ ಬ್ರಹ್ಮಕುಮಾರಿ ಆಶ್ರಮ ಗೇಟ್ ಬಳಿ ಬಾ ಎಂದು ಕರೆದಿದ್ದಾರೆ. ಅಲ್ಲಿಗೆ ಹೋದಾಗ ಮತ್ತೆ ಕರೆಮಾಡಿ ನಿನ್ನ ಜೊತೆ ಯಾರನ್ನು ಕರೆ ತಂದಿದ್ದಿಯಾ ಎಂದು ಪ್ರಶ್ನೆ ಮಾಡಿದ್ದಾರೆ. ನನ್ನ ಜೊತೆ ಯಾರೂ ಇಲ್ಲ ಎಂದು ಹೇಳಿದಾಗ, ಅಲ್ಲಿ ಬೇಡಾ ಮುಂದೆ ಇರುವ ತಾಂಡಾ ಕ್ರಾಸ್‌ಗೆ ಬರುವಂತೆ ಸೂಚಿಸಿದ್ದಾರೆ.