ಕಲಬುರಗಿ:ಆ ದಂಪತಿ ಕಿರಾಣಿ ಅಂಗಡಿ ಇಟ್ಟುಕೊಂಡು ಉಪಜೀವನ ನಡೆಸುತ್ತಿದ್ದರು. ಇವರಿಗೆ ಓರ್ವ ಪುತ್ರ ಹಾಗೂ ಪುತ್ರಿ ಇಬ್ಬರು ಮುದ್ದಾದ ಮಕ್ಕಳಿದ್ದರು. ಆದರೆ ಪತ್ನಿಗೆ ವಕ್ಕರಿಸಿದ ಅನಾರೋಗ್ಯ ಇಡೀ ಕುಟುಂಬದ ಖುಷಿಯನ್ನೇ ಸರ್ವನಾಶ ಮಾಡಿದೆ. ಸಾಲ ಸೂಲ ಮಾಡಿ ಆಸ್ಪತ್ರೆಗೆ ತೋರಿಸಿದರು ಆರೋಗ್ಯ ಸುಧಾರಿಸಿರಲಿಲ್ಲ. ಸಾಲ ಬೆಳೆಯಿತು ಹೊರತಾಗಿ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ ಎಂದು ಜಿಗುಪ್ಸೆಗೆ ಒಳಗಾದ ವ್ಯಕ್ತಿ ಮಾಡಿದ್ದು ಮಾತ್ರ ಮನಕಲಕುವ ಕೃತ್ಯ.
ಒಂದೆಡೆ ಹೆಚ್ಚಾದ ಸಾಲ, ಇನ್ನೊಂದೆಡೆ ಸುಧಾರಿಸದ ಪತ್ನಿ ಆರೋಗ್ಯ. ಈ ಕೊರಗಿನಲ್ಲಿದ್ದ ವ್ಯಕ್ತಿ ತನ್ನ ಇಬ್ಬರು ಮುದ್ದಾದ ಮಕ್ಕಳನ್ನ ಬಾವಿಗೆ ತಳ್ಳಿ ನಂತರ ತಾನೂ ಅದೇ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ. ಆಳಂದ ಪಟ್ಟಣದ ನೇಕಾರ ಕಾಲೋನಿ ನಿವಾಸಿ ಸಿದ್ದಾರೂಡ ಮಹಾಮಲ್ಲಪ್ಪ ಅಕ್ಕ (35), ಅವರ ಪುತ್ರಿ ಶ್ರೇಯಾ (10) ಹಾಗೂ ಮಗ ಮನೀಶ್ (11) ಮೃತರು.
ಶಾಲೆಯಿಂದ ಮನೆಗೆ ಬರುವ ಬದಲಾಗಿ ಇಹಲೋಕಕ್ಕೆ: ಮಾರ್ಕೆಟ್ ಏರಿಯಾದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡು ಸಿದ್ದಾರೂಡ ಉಪಜೀವನ ನಡೆಸುತ್ತಿದ್ದರು. ಪಟ್ಟಣದ ಹತ್ಯಾನ ಬಡಾವಣೆಯಲ್ಲಿರುವ ನೇತಾಜಿ ಪ್ರಾಥಮಿಕ ಶಾಲೆಯಲ್ಲಿ ಮನೀಶ್ 5ನೇ ತರಗತಿ ಹಾಗೂ ಶ್ರೇಯಾ 4ನೇ ತರಗತಿಯಲ್ಲಿ ಓದುತ್ತಿದ್ದರು.
ಎಂದಿನಂತೆ ಗುರುವಾರ ಬೆಳಗ್ಗೆ ಮಕ್ಕಳನ್ನು ಶಾಲೆಗೆ ಬಿಟ್ಟು ಬಂದಿದ್ದ ಸಿದ್ದಾರೂಡ, ಸಾಯಂಕಾಲ ಮಕ್ಕಳನ್ನು ಕರೆದುಕೊಂಡು ಬರಲು ಬೈಕ್ ತೊಗೊಂಡು ಹೋಗಿದ್ದರು. ಆದರೆ ಮಕ್ಕಳನ್ನ ಕರೆದುಕೊಂಡು ಬರುವಾಗ ಮಾರ್ಗ ಮಧ್ಯೆ ಅದೇನಾಯ್ತೋ ಗೊತ್ತಿಲ್ಲ. ಆಳಂದ ಪಟ್ಟಣದ ಪ್ರವಾಸಿ ಮಂದಿರ ಹಾಗೂ ಬಸ್ ಘಟಕ ಮಧ್ಯೆ ಇರುವ ಬಾವಿ ಬಳಿ ಬೈಕ್ ನಿಲ್ಲಿಸಿ ಮಕ್ಕಳ ಸಮೇತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುದ್ದಾದ ಇಬ್ಬರು ಮಕ್ಕಳನ್ನ ಮೊದಲು ಬಾವಿಗೆ ತಳ್ಳಿ ನಂತರ ತಾನೂ ಅದೇ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.