ಕಲಬುರಗಿ:''ಸಾರ್ವಜನಿಕರಿಗೆ ಕಾಲಮಿತಿಯೊಳಗೆ ಸರ್ಕಾರಿ ಸೇವೆ ನೀಡುವ ಸಕಾಲ ಯೋಜನೆಯಡಿ 2023ರ ನವೆಂಬರ್ ತಿಂಗಳ ಅರ್ಜಿ ವಿಲೇವಾರಿಯಲ್ಲಿ ಕಲಬುರಗಿ ಜಿಲ್ಲೆಯು ಶೇ 100ರಷ್ಟು ಸಾಧನೆ ಮಾಡಿದ್ದು, ರಾಜ್ಯದಲ್ಲಿ ನಂಬರ್ 1 ಸ್ಥಾನ ಗಳಿಸಿದೆ'' ಎಂದು ಜಿಲ್ಲಾಧಿಕಾರಿ ಬಿ.ಪೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011 ಮತ್ತು ತಿದ್ದುಪಡಿ ಅಧಿನಿಯಮ 2014ರಂತೆ 100ಕ್ಕೂ ಹೆಚ್ಚಿನ ಇಲಾಖೆಗಳ 1,181 ಸೇವೆಗಳನ್ನು ಕಾಲಮಿತಿಯಲ್ಲಿ ನಾಗರಿಕರಿಗೆ ನೀಡಲಾಗುತ್ತಿದೆ. ಪ್ರಸಕ್ತ ವರ್ಷದ ಕಳೆದ ಜೂನ್ ತಿಂಗಳಲ್ಲಿ ಅರ್ಜಿ ವಿಲೇವಾರಿ ಪ್ರಮಾಣ ಶೇ 82.54ರಷ್ಟು ಇದ್ದರೆ, ಪ್ರಸ್ತುತ ನವೆಂಬರ್ನಲ್ಲಿ ಸಲ್ಲಿಕೆಯಾದ 1,02,002 ಅರ್ಜಿಗಳಲ್ಲಿ 1,07,011 ಅರ್ಜಿ ವಿಲೇವಾರಿ ಮಾಡುವ ಮೂಲಕ ಇದರ ಪ್ರಮಾಣ ಶೇ 100.34ಕ್ಕೆ ಏರಿಕೆ ಲಭಿಸಿದ್ದು, ಆಡಳಿತಕ್ಕೆ ವೇಗ ನೀಡಲಾಗಿದೆ.
ಒಟ್ಟಾರೆ 2023ರ ಜೂನ್ನಿಂದ ನವೆಂಬರ್ವರೆಗೆ ವಿವಿಧ ಇಲಾಖೆಯಡಿ ಸ್ವೀಕೃತ 7,23,259 ಅರ್ಜಿಗಳಲ್ಲಿ 7,25,716 ಅರ್ಜಿ ವಿಲೇವಾರಿಗೊಳಿಸಿದೆ. ಇದರಲ್ಲಿ ಕಂದಾಯ ಇಲಾಖೆಯು ಬಹುಪಾಲು ಅಂದರೆ 5,89,786 ಅರ್ಜಿಗಳಲ್ಲಿ 5,93,992 ಅರ್ಜಿ ವಿಲೇವಾರಿ ಮಾಡುವ ಮೂಲಕ ವಿಲೇವಾರಿ ಪ್ರಮಾಣವನ್ನು ಶೇ 79.72ರಿಂದ ಶೇ 100.71ಕ್ಕೆ ಹೆಚ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಜಿಲ್ಲೆಯ 11 ತಾಲೂಕಿನ ಅಟಲ್ ಜೀ ಜನಸ್ನೇಹಿ ಕೇಂದ್ರದ ಮೂಲಕ 371(ಜೆ), ಜಾತಿ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ವಿವಿಧ ಪಿಂಚಣಿಗಳ ಅರ್ಜಿ ವಿಲೇವಾರಿ ಮಾಡಲಾಗುತ್ತಿದ್ದು, ಕಳೆದ 6 ತಿಂಗಳ ಅವಧಿಯಲ್ಲಿ ಸಲ್ಲಿಕೆಯಾದ 5,30,968 ಅರ್ಜಿಗಳ ಪೈಕಿ ಇದುವರೆಗೆ 5,14,363 ಅರ್ಜಿ ವಿಲೇ ಮಾಡಿ ಶೇ 96.87 ಸರಾಸರಿ ಪ್ರಗತಿ ಸಾಧಿಸಲಾಗಿದೆ.
ರಾಜ್ಯ ಸರ್ಕಾರವು ಕರ್ನಾಟಕ ಭೂ ಕಂದಾಯ ನಿಯಮಗಳು 1966ಕ್ಕೆ ತಿದ್ದುಪಡಿ ತಂದು ಕೃಷಿ ಜಮೀನಿಗೆ ಸಂಬಂಧಿಸಿದಂತೆ ವರ್ಗಾವಣೆ ಕೈಗೊಳ್ಳುವಾಗ ವರ್ಗಾವಣೆಗಳ ಮುದ್ದತ್ತು (ಆಕ್ಷೇಪಣೆ ಸ್ವೀಕರಿಸು/ನೋಟಿಸ್) ಅವಧಿಯನ್ನು ಈ ಹಿಂದಿದ್ದ 30 ದಿವಸಗಳ ಕಾಲಾವಧಿಯಿಂದ ನೋಂದಾಯಿತ ದಾಖಲೆಯ ಆಧಾರದ ಮೇಲೆ ಕೈಗೊಳ್ಳುವ ವರ್ಗಾವಣೆಗಳಲ್ಲಿ 7 ದಿನಗಳು, ನೋಂದಾಯಿತವಲ್ಲದ ದಾಖಲೆಯ ಆಧಾರದ ಮೇಲೆ ಕೈಗೊಳ್ಳುವ ವರ್ಗಾವಣೆಗಳಲ್ಲಿ 15 ದಿನಗಳ ಕಾಲಾವಧಿಯನ್ನು ನಿಗದಿಪಡಿಸಿದೆ. ಅದರಂತೆ ನೋಂದಾಯಿತ ದಾಖಲೆಗಳ ಮೇಲೆ ಮೇ 2023ರಿಂದ ನವೆಂಬರ್ 2023ರವರೆಗೆ 12,818 ವರ್ಗಾವಣೆ ಅರ್ಜಿಗಳಲ್ಲಿ 12,435 ವಿಲೇವಾರಿ ಮಾಡಿದೆ. ನೋಂದಾಯಿತವಲ್ಲದ (ಪೌತಿ) ಪ್ರಕರಣಗಳ ಈ ಅವಧಿಯಲ್ಲಿ 5,196 ಪ್ರಕರಣ ಪೈಕಿ 5,741 ವಿಲೇವಾರಿಗೊಳಿಸಿದೆ. ಮೇ ತಿಂಗಳಲ್ಲಿ ಅರ್ಜಿಗಳ ಸರಾಸರಿ ವಿಲೇವಾರಿ ದಿನಗಳು 34.27 ಆಗಿದ್ದರೆ, ಹಿಂದಿನ 6 ತಿಂಗಳ ಕಾಲಾವಧಿ ಗಮನಿಸಿದಾಗ ಸರಾಸರಿ ವಿಲೇವಾರಿ ದಿನಗಳು 12.86ಕ್ಕೆ ಇಳಿಕೆಯಾಗಿದೆ. ನೋಟಿಸ್ ರಹಿತ ವರ್ಗಾವಣೆಗಳ ಪ್ರಕರಣದಲ್ಲಿ 35,318 ಅರ್ಜಿಗಳಲ್ಲಿ 35,667 ವಿಲೇವಾರಿಗೊಳಿಸಿದ್ದು, ಇಲ್ಲಿಯೂ ಸಹ ವಿಲೇವಾರಿ ದಿನಗಳನ್ನು 2.40ರಿಂದ 0.38ಕ್ಕೆ ಇಳಿಕೆ ಮಾಡಲಾಗಿದೆ.
ಪಹಣಿ ಕಾಲಂ (3) ಮತ್ತು (9) ಭಿನ್ನತೆಗಳನ್ನು ಸರಿಪಡಿಸುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇ ತಿಂಗಳಿನಿಂದ ನವೆಂಬರ್ವರೆಗೆ ಒಟ್ಟು 5,631 ಪ್ರಕರಣಗಳಲ್ಲಿ 2,429 ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಪಹಣಿ ತಿದ್ದುಪಡಿ ಮಾಡಲಾಗಿದೆ. ಇನ್ನೂ ಇದೇ ಅವಧಿಯಲ್ಲಿ ಸಲ್ಲಿಕೆಯಾದ 7,960 ಪ್ರಕರಣಗಳಲ್ಲಿ 3,752 ಪ್ರಕರಣಗಳು ವಿಲೇವಾರಿ ಮಾಡಿ ಶೇ 47ರಷ್ಟು ಮೋಜಣಿ ಪಹಣಿಗಳ ತಿದ್ದುಪಡಿ ಸಹ ಮಾಡಲಾಗಿದೆ. ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಮತ್ತು ಎಸ್ಸಿ, ಎಸ್ಟಿ ಸಮುದಾಯಕ್ಕೆ ಮಂಜೂರು ಮಾಡಿದ ಜಮೀನು ಒತ್ತುವರಿಗೆ ಕಡಿವಾಣ ಹಾಕಲು ಕಳೆದ ಸೆಪ್ಟೆಂಬರ್ 17ರಿಂದ ಇಲ್ಲಿಯವರೆಗೆ 3,574 ಪಿಟಿಸಿಎಲ್ ಹಾಗೂ 1,359 ಸರ್ಕಾರಿ ಜಮೀನುಗಳನ್ನು ಫ್ಲ್ಯಾಗಿಂಗ್ ಮಾಡಲಾಗಿದೆ.