ಕಲಬುರಗಿ: ಹಸಿರು ಸೀರೆ ತೊಟ್ಟಂತೆ ಮುದ್ದಾಗಿ ನಿಂತಿರುವ ಬಾಳೆ ಗಿಡಗಳು. ಇನ್ನೊಂದೆಡೆ ಮೈದುಂಬಿ ಆಕರ್ಷಿಸುತ್ತಿರುವ ಬಾಳೆಗೊನೆಗಳು. ಈ ದೃಶ್ಯ ಕಂಡು ಬಂದಿರೋದು, ಜಿಲ್ಲೆಯ ಆಳಂದ ತಾಲೂಕಿನ ನಿಂಬಾಳ ಗ್ರಾಮದಲ್ಲಿ. ಸಾಮಾನ್ಯವಾಗಿ ಬಾಳೆಹಣ್ಣಿಗೆ ವರ್ಷಪೂರ್ತಿ ಡಿಮ್ಯಾಂಡ್ ಇದ್ದೆ ಇರುತ್ತೆ, ಹಾಗಂತ ಬಾಳೆ ಬೆಳೆದ ಪ್ರತಿಯೊಬ್ಬ ರೈತನ ಬದುಕು ಬಂಗಾರ ಆಗುತ್ತೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಆದರೆ ರೈತ ಗುರುಶಾಂತಗೌಡ ಪಾಟೀಲ್ ಬದುಕು ಬಾಳೆ ಕೃಷಿಯಲ್ಲಿ ಬಂಗಾರವಾಗಿದೆ.
20 ಲಕ್ಷ ರೂ. ಆದಾಯ: ಇವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಜಿ-9 ತಳಿಯ ಬಾಳೆ ಕೃಷಿ ಮಾಡಿ ಲಾಭ ಮಾಡಿದ್ದಾರೆ. ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡಿದ್ದರಿಂದ ಬಾಳೆ ಅತ್ಯಂತ ಉತ್ಕೃಷ್ಟ ಗುಣಮಟ್ಟದಿಂದ ಕೂಡಿದೆ. ಅಲ್ಲದೇ ವಿದೇಶಕ್ಕೆ ರಫ್ತು ಮಾಡಲು ಸಾಧ್ಯವಾಗಿದೆ. ಮಧ್ಯವರ್ತಿ ಸಹಾಯದಿಂದ ಒಟ್ಟು 25 ಟನ್ಗಳಷ್ಟು ಬಾಳೆ ಹಣ್ಣನ್ನು ಇರಾಕ್‌ಗೆ ರಫ್ತು ಮಾಡಿ, ಸುಮಾರು 20 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ.
ಹನಿ ನೀರಾವರಿ ಪದ್ಧತಿ ಅಳವಡಿಕೆ: ಬಾಳೆ ಕೃಷಿ ಬಗ್ಗೆ ಆಲೋಚಿಸಿದ ರೈತ ಗುರುಶಾಂತಗೌಡ ಪಾಟೀಲ್, ಅಟ್ಲಾಂಟಿಕ್ ಜಿ-9 ತಳಿಯ ಬಾಳೆ ಕೃಷಿ ಬಗ್ಗೆ ಒಲವು ತೋರಿದ್ದರು. ಈ ವರ್ಷ ಆರಂಭದ ಜನವರಿ ತಿಂಗಳಲ್ಲಿ ಹೈದರಾಬಾದ್ನಿಂದ 500 ಸಸಿ ತಂದು ನಾಲ್ಕು ಎಕರೆ ಜಮೀನಿನಲ್ಲಿ ನಾಟಿ ಮಾಡಿದ್ದರು. ನಾಟಿಗೂ ಮುಂಚೆ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ಇದರಿಂದ ಪೋಲಾಗುತ್ತಿದ್ದ ನೀರು ಉಳಿತಾಯ ಒಂದಡೆಯಾದ್ರೆ, ಕಳೆ ನಿಯಂತ್ರಣ ಕೂಡಾ ಆಗಿದೆ. ಡ್ರೀಪ್ ಮೂಲಕವೇ ರಸಗೊಬ್ಬರ ಔಷಧ ನೀಡಿದ್ದು, ಎಲ್ಲಾ ಬೆಳೆಗೆ ಸಮನಾಂತರವಾಗಿ ಪೂರೈಕೆ ಆಗಿದೆ.