ಕಲಬುರಗಿ:ಈ ಬಾರಿಯ ವರ್ಷಧಾರೆಗೆ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದು, ಕೆಲ ದಿನಗಳ ಕಾಲ ಸುಮ್ಮನಿದ್ದ ವರುಣ ಮತ್ತೆ ಅಬ್ಬರಿಸುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಜಡಿ ಮಳೆ ಜನತೆಯನ್ನ ಮನೆಯಲ್ಲೇ ದಿಗ್ಬಂಧನ ಹಾಕುವಂತೆ ಮಾಡಿದೆ.
ಕಲಬುರಗಿ: ಜಡಿ ಮಳೆಗೆ ಬೆಳೆ ಹಾನಿ, ಕಂಗಾಲಾದ ಅನ್ನದಾತ ನಿನ್ನೆ ಸಂಜೆ ಒಂದು ಗಂಟೆಕಾಲ ಧಾರಾಕಾರ ಮಳೆ ಸುರಿದಿದೆ. ರಾತ್ರಿ ಬಿಡುವು ಕೊಟ್ಟಿದ್ದ ವರುಣ ಮತ್ತೆ ಬೆಳಗ್ಗೆಯಿಂದ ಸುರಿಯುತ್ತಿದ್ದು ಜಡಿ ಮಳೆಗೆ ಹೆದರಿದ ಕಲಬುರಗಿ ಜನ ಮನೆಯಿಂದ ಹೊರ ಬಾರದೆ ಮನೆಯಲ್ಲೇ ಉಳಿದಿದ್ದಾರೆ. ಮಳೆಯಿಂದ ಕಲಬುರಗಿ ನಗರದಲ್ಲಿ ಬಂದ್ ರೀತಿಯ ವಾತಾವರಣ ಕಂಡು ಬಂದಿತ್ತು. ಹಾಳಾದ ರಸ್ತೆ ಗುಂಡಿಗಳಲ್ಲಿ ನೀರು ತುಂಬಿದ್ದು, ಬೈಕ್ ಸವಾರರು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು.
ಜಿಲ್ಲೆಯ ಆಳಂದ, ಅಫಜಲಪುರ, ಕಮಲಾಪುರ, ಚಿಂಚೋಳಿ, ಸೇಡಂ ತಾಲೂಕಿನ ಹಲವೆಡೆ ಮಳೆರಾಯ ಮತ್ತೆ ಆರ್ಭಟಿಸಿದ್ದಾನೆ. ವಾಡಿಕೆಗಿಂತ ಈ ವರ್ಷ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಸುರಿದು, ಅನ್ನದಾತನ ಬದುಕಿನ ಬೆಳೆಯನ್ನೇ ಕಸಿದುಕೊಂಡಿದೆ. ಅಳಿದುಳಿದ ಹತ್ತಿ, ತೊಗರಿ, ಸಜ್ಜೆ ಬೆಳೆಯಾದರೂ ಕೈ ಸೇರುತ್ತೆ ಎಂಬ ನಿರೀಕ್ಷೆಯಲ್ಲಿ ಅನ್ನದಾತ ಇರುವಾಗಲೇ ಇದೀಗ ಮತ್ತೆ ಮಳೆ ಸುರಿದು ರೈತ ಕಂಗಾಲಾಗಿದ್ದಾನೆ.
ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸಾಲ ಸೋಲ ಮಾಡಿಕೊಂಡು ಬೆಳೆದ ಬೆಳೆ ನಾಶವಾಗಿ ರೈತ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದು, ಪರಿಹಾರಕ್ಕಾಗಿ ಸರ್ಕಾರದ ಕಡೆ ಮುಖ ಮಾಡಿದ್ದಾನೆ.