ಕರ್ನಾಟಕ

karnataka

ETV Bharat / state

ಕಲಬುರಗಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ: ಹತ್ತಾರು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ - ETv Bahrat kannada news

ಕಲಬುರಗಿಯ ಜೇವರ್ಗಿ ತಾಲೂಕಿನ ಗಂವ್ಹಾರ ಗ್ರಾಮದಲ್ಲಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರು ಗ್ರಾಮ ವಾಸ್ತವ್ಯ ಹೂಡಿ ಜನರ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಿದರು.

Kalaburagi District Collector Yashwant Gurukar village stay
ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಗ್ರಾಮ ವಾಸ್ತವ್ಯ

By

Published : Nov 20, 2022, 8:24 AM IST

ಕಲಬುರಗಿ:ಜೇವರ್ಗಿ ತಾಲೂಕಿನ ಗಂವ್ಹಾರ ಗ್ರಾಮದಲ್ಲಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರು ಗ್ರಾಮ ವಾಸ್ತವ್ಯ ಮಾಡಿದರು. ಶನಿವಾರ ದಿನಪೂರ್ತಿ ಗ್ರಾಮದಲ್ಲಿಯೇ ಕಳೆದ ಡಿಸಿ, ಹಲವೆಡೆ ಸುತ್ತಾಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಇದೇ ಸಂದರ್ಭದಲ್ಲಿ ಸ್ಥಳದಲ್ಲಿಯೇ ಪರಿಹಾರವನ್ನೂ ಒದಗಿಸಿದರು.

ಗಂವ್ಹಾರ ಗ್ರಾಮಕ್ಕೆ ಆಗಮಿಸಿದ ಡಿಸಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಗ್ರಾಮದ ಮಹಿಳೆಯರು ಪೂರ್ಣಕುಂಭ ಕಳಸದೊಂದಿಗೆ ಬರಮಾಡಿಕೊಂಡರು. ಎತ್ತಿನ ಚಕ್ಕಡಿಯಲ್ಲಿ ಕೂರಿಸಿ ಡೊಳ್ಳು, ಹಲಗೆ ವಾದನ, ಲಂಬಾಣಿ ಮಹಿಳೆಯರ ನೃತ್ಯದೊಂದಿಗೆ ಅದ್ಧೂರಿಯಾಗಿ ವೇದಿಕೆ ಸ್ಥಳಕ್ಕೆ ಕರೆತಂದರು. ನಂತರ ಡಿಸಿ ಗ್ರಾಮದ ಶ್ರೀ ಸದ್ಗುರು ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿಗಳ ಮಠಕ್ಕೆ ತೆರಳಿ ಪೀಠಾಧಿಪತಿಗಳ ದರ್ಶನ ಪಡೆದು ಗ್ರಾಮ ವಾಸ್ತವ್ಯದ ನೆನಪಿಗೆ ಶಾಲಾ ಆವರಣದಲ್ಲಿ ಗಿಡ ನೆಟ್ಟರು.

ಜನರ ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ:ಡಿಸಿ ಬಂದಿದ್ದು ಗೊತ್ತಾಗಿ ಜನರು ತಮ್ಮ ಕಣ್ಣೀರ ಕಥೆಗಳನ್ನು ತೋಡಿಕೊಂಡರು. ಸೊಸೆಯಂದಿರು ಮನೆಯಿಂದ ಹೊರಹಾಕಿದ್ದಾರೆ. ನನಗೆ ಸೂರಿಲ್ಲ, ಕಣ್ಣು ಸರಿಯಾಗಿ ಕಾಣುವುದಿಲ್ಲ ಎಂದು ವಯೋವೃದ್ಧೆಯೊಬ್ಬರು ನೋವು ಹೇಳಿದರು. ಅವರನ್ನು ಸಮಾಧಾನಪಡಿಸಿದ ಡಿಸಿ, ತಕ್ಷಣ ಕಣ್ಣಿನ ಶಸ್ತ್ರಚಿಕಿತ್ಸೆ ‌ನಡೆಸುವಂತೆ ತಾಲೂಕು ಆರೋಗ್ಯಾಧಿಕಾರಿಗೆ ಆದೇಶಿಸಿದರು. ಗ್ರಾಮದ ವಿಶೇಷ ಚೇತನ ವ್ಯಕ್ತಿಯೋರ್ವ, ತನಗೆ 4 ವರ್ಷದಿಂದ ವಿಶೇಷಚೇತನ ಪಿಂಚಣಿ ಬರುತ್ತಿಲ್ಲ‌ ಎಂದು ಡಿಸಿ ಗಮನಕ್ಕೆ ತಂದರು. ಕೂಡಲೇ ಪಿಂಚಣಿ ಆರಂಭಿಸುವಂತೆ ಸ್ಥಳದಲ್ಲಿದ್ದ ಡಿಹೆಚ್‌ಒ ಮತ್ತು ತಹಶೀಲ್ದಾರ್‌ಗೆ ಡಿಸಿ ನಿರ್ದೇಶನ ಕೊಟ್ಟರು.

ಸೌಲಭ್ಯ ವಿತರಣಾ ಭಾಗವಾಗಿ ಕಾರ್ಮಿಕ ಇಲಾಖೆಯಿಂದ 47 ಜನರಿಗೆ ಇ-ಶ್ರಮ ಕಾರ್ಡ್ ಮತ್ತು 6 ಕಟ್ಟಡ ಕಾರ್ಮಿಕರಿಗೆ ಎಲೆಕ್ಟ್ರಿಕಲ್ ಕಿಟ್ ವಿತರಿಸಿದ ಡಿಸಿ, ಕಟ್ಟಡ ಕಾರ್ಮಿಕರಾದ ಕಮಲಾಬಾಯಿ, ತಾರಾಬಾಯಿ, ಸಿದ್ದಪ್ಪ ಎನ್ನವವರ ಮಕ್ಕಳ ಮದುವೆಗೆ ತಲಾ 50 ಸಾವಿರ ರೂ. ಸಹಾಯಧನದ ಮಂಜೂರಾತಿ ಆದೇಶ ಪ್ರತಿ ನೀಡಿದರು. ಗರ್ಭಿಣಿಯರಿಗೆ ತಾಯಿ ಕಾರ್ಡ್, ಸುಕನ್ಯಾ ಸಮೃದ್ಧಿ ಪಾಸ್ ಬುಕ್, ಎ.ಬಿ.ಆರ್.ಕೆ. ಆರೋಗ್ಯ ಕಾರ್ಡ್, ವೃದ್ಧರಿಗೆ ಸಾಮಾಜಿಕ ಪಿಂಚಣಿ ಆದೇಶ ಪತ್ರ ವಿತರಣೆ ಮಾಡಿದರು.

ಗರ್ಭಿಣಿ, ಬಾಣಂತಿಯರಿಗೆ ಗ್ರಾ.ಪಂ.ಅಧ್ಯಕ್ಷೆ ಶಿವಕಲಾ ಪಾಟೀಲ, ಸಹಾಯಕ ಆಯುಕ್ತೆ ಮಮತಾ ಕುಮಾರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭ, ಎ.ಪಿ.ಎಂ.ಸಿ. ಕಾರ್ಯದರ್ಶಿ ಸುಮಂಗಲಾ ಹೂಗಾರ, ಅಬಕಾರಿ ಸಿ.ಪಿ.ಐ ವನಿತಾ ಎಸ್., ತಾಲೂಕಾ ಅಲ್ಪಸಂಖ್ಯಾತ ಅಧಿಕಾರಿ ಶಕುಂತಲಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಮಹಾದೇವಿ ಅವರು ಅರತಿ ಬೆಳಗಿ ಹೂ, ಬಳೆ, ಹಣ್ಣು ನೀಡಿ ಉಡಿ ತುಂಬಿ ಸೀಮಂತ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ವೇಳೆ ಅಂಗನವಾಡಿ ಮಕ್ಕಳಾದ ಕು.ಕಮಲಾಬಾಯಿ ಮತ್ತು ಕು.ಕವಿತಾ ಅವರ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಯಿತು.

ಪಡಿತರ ಅಂಗಡಿ, ಆರೋಗ್ಯ ಕೇಂದ್ರಕ್ಕೆ ಡಿಸಿ ಭೇಟಿ:ಮಧ್ಯಾಹ್ನದ ಊಟದ ನಂತರ ಡಿಸಿ, ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ತಾಂಡಾಗೆ ತೆರಳಿ ನಿವಾಸಿಗಳ ಅಹವಾಲು ಆಲಿಸಿದರು. ಪಡಿತರ ಅಂಗಡಿಗೆ ಭೇಟಿ ನೀಡಿ ಅಲ್ಲಿದ್ದ ಪಡಿತರದಾರರೊಂದಿಗೆ ಮಾತನಾಡುತ್ತಾ, ಪಡಿತರ ಸರಿಯಾಗಿ ನೀಡಲಾಗುತ್ತಿದೆಯೇ ಎಂದು ವಿಚಾರಿಸಿ, ಪಡಿತರವನ್ನು ಯಾವುದೇ ಕಾರಣಕ್ಕೂ ಕಾಳಸಂತೆಯಲ್ಲಿ ಮಾರಾಟ ಮಾಡಬಾರದು ಎಂದು ಎಚ್ಚರಿಕೆ ಕೊಟ್ಟರು.

ಇದನ್ನೂ ಓದಿ:ಕಲಬುರಗಿ ಜಿಲ್ಲೆಯ ಅತಿವೃಷ್ಠಿ ಬೆಳೆ ಹಾನಿ: ಏಳು ಕಂತಿನಲ್ಲಿ 234 ಕೋಟಿ ಪರಿಹಾರ - ಡಿಸಿ ಯಶವಂತ ಗುರುಕರ್

ABOUT THE AUTHOR

...view details