ಕಲಬುರಗಿ: ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಅವರ ಸೇವೆ ಮಾಡಲೆಂದೇ ಸಾರ್ವಜನಿಕ ಸೇವೆಗೆ ಬಂದಿರುವೆ. ಜಿಲ್ಲಾಧಿಕಾರಿಯಾಗಿ ಇಲ್ಲಿ ಮಾಡಿರುವ ಸೇವೆ ತೃಪ್ತಿ ತಂದಿದೆ. ಕಲಬುರಗಿ ಸೇವಾ ಅವಧಿಯಲ್ಲಿ ಇಲ್ಲಿನ ಜನರು ತೋರಿದ ಪ್ರೀತಿ ಎಂದೂ ಮರೆಯಲ್ಲ ಎಂದು ನಿರ್ಗಮಿತ ಡಿ.ಸಿ.ಯಶವಂತ ವಿ. ಗುರುಕರ್ ಹೇಳಿದರು.
ಸೋಮವಾರ ಇಲ್ಲಿನ ಡಿ.ಸಿ.ಕಚೇರಿ ಸಭಾಂಗಣದಲ್ಲಿ ಕಚೇರಿ ಸಿಬ್ಬಂದಿಯಿಂದ ಆಯೋಜಿಸಿದ ಆತ್ಮೀಯ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯ ಜನರು ನೇರವಾಗಿ ಮಾತನಾಡುವರು. ಒಳಗೊಂದು-ಹೊರಗೊಂದು ಮಾತನಾಡುವವರಲ್ಲ. ಇನ್ನು ನನ್ನ ಸ್ವಭಾವ ಸಹ ಹೀಗೆ ಇದೆ ಎಂದರು.
ಕಲಬುರಗಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ಚೀಕರಿಸಿದ ಸಂದರ್ಭದಲ್ಲಿ ಕೋವಿಡ್ ಎರಡನೇ ಡೋಸ್ ಪ್ರತಿಶತ ಪ್ರಮಾಣದಲ್ಲಿ ಜಿಲ್ಲೆಯ ಸ್ಥಾನ ಹೇಳಿಕೊಳ್ಳುವಂತಿರಲಿಲ್ಲ. ಆರೋಗ್ಯ ಇಲಾಖೆಯ ಸಹಕಾರದಿಂದ ಮೂರೇ ತಿಂಗಳಲ್ಲಿ ಶೇ.73 ರಿಂದ 93ಕ್ಕೆ ಪ್ರಗತಿ ಸಾಧಿಸಲಾಗಿತ್ತು. ಮುಂದೆ ಸಕಾಲ, ಭೂಮಿ ಅರ್ಜಿ ವಿಲೇವಾರಿಯಲ್ಲಿ ಟಾಪ್ 5 ರಲ್ಲಿ ಬರಲು ಶ್ರಮಿಸಲಾಯಿತು. ಇದರಲ್ಲಿ ತಹಶೀಲ್ದಾರ್ ಮತ್ತು ಕಂದಾಯ ಸಿಬ್ಬಂದಿಗಳ ಪಾತ್ರವು ಶ್ಲಾಘನೀಯ ಎಂದು ತಮ್ಮ ಕೆಳ ಹಂತದ ಅಧಿಕಾರಿ-ಸಿಬ್ಬಂದಿಗಳ ಸೇವೆಯನ್ನು ಯಶವಂತ ವಿ. ಗುರುಕರ್ ಸ್ಮರಿಸಿದರು.
ಅಧಿಕಾರ ಇವತ್ತು ಇರುತ್ತೆ, ನಾಳೆ ಇರಲ್ಲ. ಆದರೆ ಅಡಳಿತ ವ್ಯವಸ್ಥೆಯಲ್ಲಿ ಜನಸ್ನೇಹಿ ವ್ಯವಸ್ಥೆ ನಿರ್ಮಿಸುವುದು ತುಂಬಾ ಅವಶ್ಯಕ ಎಂದು ಪ್ರತಿಪಾದಿಸಿದ ಅವರು, 72 ಗಂಟೆಯಲ್ಲಿ ಮನೆ ಬಾಗಿಲಿಗೆ ಸಾಮಾಜಿಕ ಪಿಂಚಣಿ ನೀಡಬೇಕೆಂಬ ನನ್ನ ಕನಸನ್ನು ರಾಜ್ಯ ಸರ್ಕಾರ "ಹಲೋ ಕಂದಾಯ ಸಚಿವರೇ" ಯೋಜನೆ ಮೂಲಕ ಜಾರಿಗೆ ತಂದ ಪರಿಣಾಮ ಇಂದು 1.50 ಲಕ್ಷ ಜನರು ಮನೆಯ ಬಾಗಿಲಲ್ಲೆ ಪಿಂಚಣಿ ಪಡೆದಿದ್ದಾರೆ. ಇನ್ನು ಕಳೆದ ಜನವರಿಯಲ್ಲಿ ಮಳಖೇಡದಲ್ಲಿ ಪ್ರಧಾನಮಂತ್ರಿಗಳು ಜಿಲ್ಲೆಯ 27 ಸಾವಿರ ಸೇರಿ ಒಂದೇ ದಿನ 52 ಸಾವಿರ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದ್ದು, ತಮಗೆ ಆಂತರಿಕ ತೃಪ್ತಿ ನೀಡಿದೆ ಎಂದು ತಮ್ಮ ಸೇವಾ ಅವಧಿಯನ್ನು ಮೆಲುಕು ಹಾಕಿದರು.