ಕಲಬುರಗಿ:ದೀಪಾವಳಿ ಬಂತೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ, ಅಪ್ಪ, ಅಮ್ಮ, ಅಜ್ಜ, ಅಜ್ಜಿ ಹೀಗೆ ಕುಟುಂಬ ಸದಸ್ಯರೊಂದಿಗೆ ಖುಷಿಯಿಂದ ದೀಪ ಬೆಳಗಿಸಿ ಸಿಹಿ ತಿಂದು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಆದರೆ ಹೆತ್ತವರು ಯಾರು ಅನ್ನೋದೇ ಗೊತ್ತಿರದ ಅನಾಥ ಮಕ್ಕಳ ಪಾಲಿಗೆ ಜಿಲ್ಲಾಡಳಿತವೇ ತಾಯಿಯಾಗಿ ನಿಂತು ದೀಪಾವಳಿ ಹಬ್ಬದ ಸಂಭ್ರಮ ನೀಡಿದೆ. ಮಾತೃ ಹೃದಯಿ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಹಾಗೂ ಮಹಿಳಾ ಅಧಿಕಾರಿಗಳ ತಂಡದವರು ಮಕ್ಕಳೊಂದಿಗೆ ಹಬ್ಬದ ದಿನ ಅಮೂಲ್ಯವಾದ ಸಮಯ ಕಳೆದು ಅವರೊಟ್ಟಿಗೆ ದೀಪ ಬೆಳಗಿಸಿ, ಪಟಾಕಿ ಸಿಡಿಸಿ, ಸಿಹಿ ತಿಂದು ಕುಣಿದು ಕುಪ್ಪಳಿಸಿ ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರ ನೇತೃತ್ವದಲ್ಲಿ ಮಹಿಳಾ ಅಧಿಕಾರಿಗಳ ತಂಡ ಸೋಮವಾರ ನಗರದ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಸಂಜೆ ಅನಾಥ ಮಕ್ಕಳೊಂದಿಗೆ ದೀಪಾವಳಿ ಹಬ್ಬ ಆಚರಿಸಿತು. ಮಹಿಳಾ ನಿಲಯದ ನಿಲಯಾರ್ಥಿಗಳು, ಅಮೂಲ್ಯ ಶಿಶು ಗೃಹದ ಪುಟ್ಟ ಮಕ್ಕಳು, ಬಾಲಕಿಯರ ಬಾಲ ಮಂದಿರದ ಮಕ್ಕಳು ಹಾಗೂ ವಿಶೇಷ ಚೇತನ ಮಕ್ಕಳಿಗೆ ಡಿಸಿ ಬಿ. ಫೌಜಿಯಾ ತರನ್ನುಮ್ ಅವರು ಸಿಹಿ ವಿತರಿಸಿ ಹಬ್ಬದ ಶುಭಾಶಯ ಕೋರಿದರು. ಲಕ್ಷ್ಮೀ ಪೂಜೆಯಲ್ಲೂ ಡಿಸಿ ಭಾಗಿಯಾಗಿದ್ದರು. ನಂತರ ಮಕ್ಕಳೊಂದಿಗೆ ಕೆಲ ಹೊತ್ತು ಅವರಲ್ಲೊಬ್ಬರಾಗಿ ಬೆರೆತು ಸೆಲ್ಫಿಗೆ, ಗ್ರೂಪ್ ಫೋಟೋಗಳಿಗೆ ಪೋಸ್ ನೀಡಿದರು. ಮಕ್ಕಳೊಂದಿಗೆ ಸೇರಿ ಹಸಿರು ಪಟಾಕಿ ಹಚ್ಚಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.