ಕಲಬುರಗಿ : ಮಹಾನಗರ ಪಾಲಿಕೆಯಲ್ಲಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಹಿನ್ನಡೆಯಾಗಿದೆ. ಪಾಲಿಕೆಯ ವಾರ್ಡ್ ಸಂಖ್ಯೆ 24 ರ ಬಿಜೆಪಿ ಸದಸ್ಯೆ ಪ್ರಿಯಾಂಕ್ ಅಂಬ್ರೇಶ ಅವರ ಆಯ್ಕೆಯನ್ನು ಜಿಲ್ಲಾ ನ್ಯಾಯಾಲಯ ಅಸಿಂಧುಗೊಳಿಸಿ ಆದೇಶಿಸಿದೆ.
2021ರ ಸೆಪ್ಟೆಂಬರ್‌ನಲ್ಲಿ ಮಹಾನಗರ ಪಾಲಿಕೆಯ ಚುನಾವಣೆ ನಡೆದಿತ್ತು. ಈ ಸಂದರ್ಭದಲ್ಲಿ ವಾರ್ಡ್ ಸಂಖ್ಯೆ 24 ರಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಿಯಾಂಕಾ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. ಆದರೆ ಚುನಾವಣೆ ಸಂದರ್ಭದಲ್ಲಿ ಪ್ರಿಯಾಂಕಾ ಅವರ ವಯಸ್ಸು 20 ಇದ್ದರೂ 21 ಎಂದು ಚುನಾವಣಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಅವರ ಆಯ್ಕೆ ಕಾನೂನು ಬಾಹಿರವಾಗಿದ್ದು ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಸೈಯದಾ ನೂರ್ ಫಾತಿಮಾ ಜಿಲ್ಲಾ ನ್ಯಾಯಾಲಯದಲ್ಲಿ ಚುನಾವಣೆಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಮೂರನೇ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧೀಶರಾದ ಸಿ.ಡಿ.ಖರೋಷಿ ಪ್ರೀಯಾಂಕಾ ಅವರ ಸದಸ್ಸತ್ವವನ್ನು ಅಸಿಂಧುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೈಯದಾ ನೂರದ ಫಾತಿಮಾ ಅವರು ವಿಜಯಶಾಲಿ ಎಂದು ಘೋಷಿಸುವಂತೆ ನ್ಯಾಯಾಲಯ ಸೂಚಿಸಿದೆ.