ಕಲಬುರಗಿ:ನೆಟೆ ರೋಗದಿಂದ ಹಾನಿಯಾದ ತೊಗರಿಗೆ ವೈಜ್ಞಾನಿಕ ಪರಿಹಾರ ಒದಗಿಸಲು ಆಗ್ರಹಿಸಿ ನಾಳೆ ಕರ್ನಾಟಕ ಪ್ರಾಂತ ರೈತ ಸಂಘ ನೇತೃತ್ವದಲ್ಲಿ ಕಲಬುರಗಿ ನಗರ ಬಂದ್ಗೆ ಕರೆ ನೀಡಲಾಗಿದೆ. ಹಾನಿಯಾದ ತೊಗರಿಗೆ ವೈಜ್ಞಾನಿಕ ಪರಿಹಾರ ಮತ್ತು ಬೆಳೆ ವಿಮೆ ಜಾರಿಗಾಗಿ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಕಿವಿಗೊಡದ ಹಿನ್ನೆಲೆ ನಾಳೆ ಕಲಬುರಗಿ ನಗರ ಬಂದ್ಗೆ ಕರೆ ನೀಡಲಾಗಿದೆ ಎಂದು ಕೆಪಿಆರ್‌ಎಸ್ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ತಿಳಿಸಿದ್ದಾರೆ.
ಬೆಳಗ್ಗೆ 5 ಗಂಟೆಯಿಂದ 11 ಘಂಟೆವರೆಗೆ ಕೇಂದ್ರಿಯ ಬಸ್ ನಿಲ್ದಾಣ ಎದುರು ಬಸ್ ಸಂಚಾರ ತಡೆದು ಪ್ರತಿಭಟಿಸಲಾಗುವದು, ಬಳಿಕ ಎಲ್ಲಾ ಹಳ್ಳಿಯ ರೈತರು ಆಗಮಿಸಿದ ಮೇಲೆ 11 ಗಂಟೆಗೆ ಬಸ್ ನಿಲ್ದಾಣದಿಂದ ರೈತರು ಮೆರವಣಿಗೆ ಹೊರಟು ಸೂಪರ್ ಮಾರ್ಕೆಟ್ ಅಟೋ ಸ್ಟ್ಯಾಂಡ್ ಹತ್ತಿರ ಬಹಿರಂಗ ಸಭೆ ನಡೆಸಲಾಗುವುದು. ಬಂದ್ಗೆ ಅನೇಕ ರೈತಪರ, ದಲಿತಪರ, ವ್ಯಾಪಾರಸ್ಥರು, ಪ್ರಗತಿಪರರು ಸೇರಿದಂತೆ ಅನೇಕರು ಬೆಂಬಲ ಸೂಚಿಸಿದ್ದಾರೆ ಎಂದು ಶರಣಬಸಪ್ಪ ಮಮಶೆಟ್ಟಿ ತಿಳಿಸಿದ್ದಾರೆ.
ಮಾತು ಮರೆತ ಪ್ರಧಾನಿ ಮೋದಿ:ಕೋಲಿ ಸಮಾಜ ಎಸ್ಟಿ ಪಂಗಡಕ್ಕೆ ಸೇರ್ಪಡೆ ಮಾಡುವದಾಗಿ 2019ರಲ್ಲಿ ಪ್ರಧಾನಿ ಮೋದಿ ನೀಡಿದ ಭರವಸೆ ಇಲ್ಲಿವರೆಗೆ ಈಡೇರಿಸಿಲ್ಲ ಎಂದು ನಗರದ ಪತ್ರಿಕಾ ಭವನದಲ್ಲಿ ಕೊಲಿ ಸಮಾಜದ ಮುಖಂಡ ಲಚ್ಚಪ್ಪ ಜಮಾದಾರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೊಲಿ ಸಮುದಾಯ ಎಸ್ಟಿಗೆ ಸೇರಿಸಲು ಹಲವು ವರ್ಷಗಳಿಂದ ಬೇಡಿಕೆ ಇಡಲಾಗುತ್ತಿದೆ. ಕಳೆದ 2019ರಲ್ಲಿ ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುವದಾಗಿ ಮೋದಿ ಭರವಸೆ ನೀಡಿದ್ದರು. ಆದರೂ ಬೇಡಿಕೆ ಈಡೇರಿಸಿಲ್ಲ, ಇದೇ 19 ರಂದು ಕಲಬುರಗಿ ಜಿಲ್ಲೆಗೆ ಬರುತ್ತಿರುವ ಪ್ರಧಾನಮಂತ್ರಿಗಳು ಆಗಲಾದರೂ ಎಸ್ಟಿ ಸೇರ್ಪಡೆ ಘೋಷಣೆ ಮಾಡಬೇಕು. ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಧಾನಿಗಳ ಮೇಲೆ ಒತ್ತಡ ಹೇರಬೇಕು. ಇಲ್ಲದಿದ್ದರೆ ಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗಲಿದೆ ಎಂದು ಎಚ್ಚರಿಸಿದರು.
ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಕಂದಾಯ ಇಲಾಖೆ ಕಾರ್ಯದರ್ಶಿ ಸಭೆ:ಇದೇ ಜನವರಿ 19 ರಂದು ಸೇಡಂ ತಾಲೂಕಿನ ಮಳಖೇಡದಲ್ಲಿ ಫಲಾನುಭವಿಗಳಿಗೆ ಕಂದಾಯ ಗ್ರಾಮಗಳ ಹಕ್ಕುಪತ್ರಗಳ ವಿತರಿಸುವ ಪ್ರಧಾನಮಂತ್ರಿಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವಂತೆ ಕಂದಾಯ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಎನ್.ಜಯರಾಮ್ ಸೂಚಿಸಿದರು.