ಕಲಬುರಗಿ: ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಯನ್ನು ನೆಚ್ಚಿಕೊಂಡಿದ್ದಾರೆ. ಆಸ್ಪತ್ರೆಯ ದುರಾವಸ್ಥೆಯಿಂದ ರೋಗಿಗಳು ನಿತ್ಯ ಪರದಾಡುವಂತಾಗಿದೆ. ಅದರಲ್ಲೂ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ರೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಇದ್ಯಾವುದು ತಮಗೆ ಸಂಬಂಧವೇ ಇಲ್ಲವೆಂಬಂತೆ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.
ಬಿಸಿಲೂರು ಕಲಬುರಗಿ ಜಿಲ್ಲಾಸ್ಪತ್ರೆಯ ದುರಾವಸ್ಥೆಗೆ ರೋಗಿಗಳು ನಿತ್ಯ ಹೈರಾಣಾಗುತ್ತಿದ್ದಾರೆ. ಆಸ್ಪತ್ರೆಯ ವಾರ್ಡ್ ಗಳ ಸುತ್ತಮುತ್ತ ಎಲ್ಲೆಂದರಲ್ಲಿ ಕಸ ಬಿದ್ದಿದ್ದರೂ ಸಿಬ್ಬಂದಿ ಮಾತ್ರ ಅದನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿಲ್ಲ. ಹರಿದ ಬೆಡ್ಗಳಲ್ಲಿ ತಿಗಣೆ ಕಾಟದ ಮಧ್ಯೆ ರೋಗಿಗಳು ಚಿಕಿತ್ಸೆ ಪಡೆಯುವಂತ ಪರಿಸ್ಥಿತಿ ಇದೆ. ಗಬ್ಬೆದ್ದು ನಾರುತ್ತಿರುವ ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ.
ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕಾಂಶಯುಕ್ತ ಗುಣಮಟ್ಟದ ಆಹಾರ ಕೂಡ ನೀಡಿತ್ತಿಲ್ಲ ಎಂದು ಬಡ ರೋಗಿಗಳು ಅಸಹಾಯಕರಾಗಿ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಸಮಸ್ಯೆ ಬಗೆ ಹರಿಸುವಂತೆ ಸಾಕಷ್ಟು ಸಂಘಟನೆಗಳು ಹೋರಾಟ ನಡೆಸಿದ್ರೂ ಆಸ್ಪತ್ರೆ ಆಡಳಿತ ವರ್ಗ ಮಾತ್ರ ತಮಗೇನೂ ತಿಳಿದೇ ಇಲ್ಲ ಎಂಬಂತೆ ವರ್ತಿಸುತ್ತಿದ್ದು, ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.