ಮಾಜಿ ಸಚಿವ ಜಮೀರ್ ಅಹ್ಮದ್ ಮಾತು ಕಲಬುರಗಿ:''ಜೆಡಿಎಸ್ ಪಕ್ಷಕ್ಕೆ ಸಿದ್ದರಾಮಯ್ಯ ಇಂಜಿನ್ ಆಗಿದ್ರು. ನಾನು ಸ್ಟೇರಿಂಗ್ ಆಗಿದ್ದೆ. ನಾವು ಬಿಟ್ಟ ಮೇಲೆ ಖಾಲಿ ಬಸ್ ಆಗಿದೆ. ಇದೀಗ ಸಿಎಂ ಇಬ್ರಾಹಿಂ ಅವರು ಅದೇ ಖಾಲಿ ಬಸ್‌ನಲ್ಲಿ ಕುಳಿತಿದ್ದಾರೆ. ಇಂಜಿನ್ ಇಲ್ಲದೇ, ಖಾಲಿ ಸ್ಟೇರಿಂಗ್ನಿಂದ ಏನ್ ಮಾಡ್ತೀರಿ'' ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾಲ್ ಲೇವಡಿ ಮಾಡಿದರು. ಆಳಂದ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮತ್ತು ಸಿಎಂ ಇಬ್ರಾಹಿಂ ವಿರುದ್ಧ ವಾಗ್ದಾಳಿ ನಡೆಸಿದರು.
''ಕುಮಾರಸ್ವಾಮಿ ಏನೇನೋ ಕನಸು ಕಾಣ್ತಿದ್ದಾರೆ. ರಾಜ್ಯದಲ್ಲಿ 123 ಸೀಟ್ ಗೆಲ್ಲುವ ಆಸೆ ಇಟ್ಟುಕೊಂಡಿದ್ದಾರೆ. 2004ರಲ್ಲಿ ಸಿದ್ದರಾಮಯ್ಯ ಇದ್ದಾಗ 59 ಸೀಟ್ ಗೆದ್ದಿದ್ವಿ. ಅದೇ 59 ಸೀಟುಗಳನ್ನು ಈಗ ಗೆದ್ದು ತೋರಿಸಲಿ" ಎಂದು ಸಾವಾಲು ಹಾಕಿದರು.
2006ರಲ್ಲಿ ಸಿಎಂ ಆದಾಗ ತುಂಬಾನೇ ಪಾಪ್ಯೂಲರ್ ಆಗಿಬಿಟ್ಟೆ ಅಂತಾ 2008 ಚುನಾವಣೆಯಲ್ಲಿ 80-90 ಸೀಟ್ ಬರುತ್ತೆ ಎಂದಿದ್ದರು. ಆದ್ರೆ ಬಂದಿದ್ದು ಮಾತ್ರ 28 ಸೀಟು. 2013ರಲ್ಲಿ 40ಕ್ಕೆ ಇಳೀತು. 2018ರಲ್ಲಿ 37ಕ್ಕೆ ಬಂದಿದೆ. ಈ ಬಾರಿಯಂತೂ ಜೆಡಿಎಸ್ 15ರಿಂದ 16 ಸೀಟ್ಗಳ ಗಡಿ ದಾಟಲು ಸಾಧ್ಯವಿಲ್ಲ ಟೀಕಿಸಿದರು.
ಜಮೀರ್ ಅಹ್ಮದ್ ಭಾಷಣದ ಮಧ್ಯೆ ಆಜಾನ್ ಕೇಳಿಬಂತು. ಆಜಾನ್ ಸದ್ದು ಬರುತ್ತಿದ್ದಂತೆ ಜಮೀರ್ ಭಾಷಣ ನಿಲ್ಲಿಸಿದರು. ಆಗ ಮುಂದಕ್ಕೆ ಮಾತಾಡು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಸನ್ನೆ ಮಾಡುವ ಮೂಲಕ ಆಜಾನ್ ನಡೆಯುತ್ತಿದೆ. ಸ್ವಲ್ಪ ಕಾಯೋಣ ಎಂದು ಜಮೀರ್ ತಿಳಿಸಿದರು. ಅದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಓಕೆ ಎಂದರು. ವೇದಿಕೆಯ ಮೇಲೆ ಕೆಲಕಾಲ ಎಲ್ಲರೂ ಶಾಂತವಾದರು. ಆಜಾನ್ ಮುಕ್ತಾಯವಾದ ಬಳಿಕ ಮತ್ತೆ ಭಾಷಣ ಶುರುಮಾಡಿದ ಜಮೀರ್ ಅಹ್ಮದ್, ಜನತಾ ದಳಕ್ಕೆ ಮತ ಕೊಟ್ಟರೆ ಉಪಯೋಗವಿಲ್ಲ, ಅದು ಬಿಜೆಪಿಗೆ ಕೊಟ್ಟಂಗೆ. ದಯವಿಟ್ಟು ಕಾಂಗ್ರೆಸ್ಗೆ ಮತ ನೀಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ:ಕಾಂಗ್ರೆಸ್ ಶಾಸಕರಲ್ಲಿ ಆತಂಕ ಮೂಡಿಸಿದ ಸಿದ್ದರಾಮಯ್ಯ ಮಾತು.. ಅಷ್ಟಕ್ಕೂ ಅವರು ಹೇಳಿದ್ದೇನು?