ಕಲಬುರಗಿ:ಜನತಾ ಪರಿವಾರದಿಂದ ಹೊರಗೆ ಹೋದವರು ಮತ್ತೆ ವಾಪಸ್ ಬರ್ತಿದ್ದಾರೆ. ಮತ ಪರಿವರ್ತನೆ ಆಗುವಂತ ಬಲಿಷ್ಠ ಅಭ್ಯರ್ಥಿಗಳು ಸಂಪರ್ಕದಲ್ಲಿದ್ದು, ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗಲಿದೆ. ನಾಳೆ ಅನೇಕರು ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆ ಆಗಲಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ. ಕಲಬುರಗಿ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಕುಮಾರಸ್ವಾಮಿ, ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು. ಉತ್ತರ ಕರ್ನಾಟಕ ಭಾಗದಿಂದ 30 ರಿಂದ 40 ಅಭ್ಯರ್ಥಿಗಳ ಗೆಲವು ಖಚಿತ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ನಾಳೆ ಎರಡನೇ ಹಂತದ ಜೆಡಿಎಸ್ ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ ಮಾಡಲಾಗುವುದು. ನಿರಂತರವಾಗಿ ಪಕ್ಷ ಸಂಘಟನೆಗೆ ಓಡಾಡುತ್ತಿರುವುದರಿಂದ ಬಿಡುವು ಇಲ್ಲದೇ ಎರಡನೇ ಹಂತದ ಟಿಕೆಟ್ ಹಂಚಿಕೆ ಲಿಸ್ಟ್ ಬಿಡುಗಡೆ ಮಾಡಲು ಆಗಿಲ್ಲ. ನಾಳೆ ಎರಡನೇ ಲಿಸ್ಟ್ ಕೂಡಾ ಬಿಡುಗಡೆ ಮಾಡಲಾಗುವುದು. 123 ಸೀಟು ಗೆಲ್ಲವು ಯೋಜನೆಗೆ ಏನೆಲ್ಲ ಸರ್ಕಸ್ ಮಾಡ್ಬೇಕು ಮಾಡ್ತಿದ್ದೇವೆ ಎಂದು ಹೇಳಿದರು.
ರಾಜ್ಯದ 123 ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕು ಎಂಬ ಉದ್ದೇಶ ಇರಿಸಿಕೊಂಡು ಜೆಡಿಎಸ್ ಕಾರ್ಯತಂತ್ರ ಮಾಡುತ್ತಿದೆ. ಬಿಜೆಪಿ ಅಥವಾ ಕಾಂಗ್ರೆಸ್ಗೆ ಬಹುಮತ ಸಿಗದು. ಹೀಗಾಗಿ ಜೆಡಿಎಸ್ ಮಾತ್ರ ಪರ್ಯಾಯ ರಾಜಕೀಯವಾಗಿ ಬೆಳೆಯುತ್ತಿದೆ. ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಬರುವುದಿಲ್ಲ. ಬದಲಿಗೆ ಜೆಡಿಎಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.