ಕಲಬುರಗಿ: ಕಲ್ಯಾಣ ನಾಡಿನಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿದ ರೆಡ್ಡಿ, ಸೇಡಂ ಪಟ್ಟಣಕ್ಕೆ ಪ್ರಚಾರಕ್ಕೆಂದು ಆಗಮಿಸಿದ ವೇಳೆ ಅಬ್ಬರಿಸಿ ಭಾಷಣ ಮಾಡಿದರು. 'ಹುಲಿ ಬೋನ್‌ನಲ್ಲಿ ಇದ್ರೂ ಹುಲಿನೇ, ಕಾಡಲ್ಲಿ ಇದ್ರೂ ಹುಲಿಯೇ' ಎಂದು ಪ್ರತಿಪಕ್ಷಗಳ ವಿರುದ್ಧ ಗುಡುಗಿದರು.
ಜನಾರ್ದನ ರೆಡ್ಡಿ ಮತ್ತೆ ಬಿಜೆಪಿಗೆ ಸೇರ್ತಾರೆ ಎನ್ನುವ ಮಾಧ್ಯಮ ವರದಿ ಕುರಿತು ಪ್ರತಿಕ್ರಿಯಿಸಿದ ಅವರು, "ಇದೆಲ್ಲಾ ಸುಳ್ಳು, ಇಟ್ಟ ಹೆಜ್ಜೆ ಹಿಂದಿಡುವವನು ನಾನಲ್ಲ. ಹೆಜ್ಜೆ ಹಿಂದಿಡುವವನು ವೀರನೂ ಅಲ್ಲ ಧೀರನೂ ಅಲ್ಲ. ಜನಾರ್ದನ ರೆಡ್ಡಿಗೆ ಸಿಬಿಐ ಶಾಕ್ ಅಂತ ಮಾಧ್ಯಮದಲ್ಲಿ ಬರ್ತಿದೆ. ಆದ್ರೆ, ಸಿಬಿಐ ಶಾಕ್ಗೆ ನಾನು ಹೆದರೋನು ಅಲ್ಲ, ಬೆದರೋನೂ ಅಲ್ಲ. ನನ್ನಿಂದ ನಿಮಗೆ ಶಾಕ್ ಹೊಡಿಬೇಕೇ ಹೊರತು ಯಾರಿಂದಲೂ ನನಗೆ ಶಾಕ್ ಆಗುವ ಪ್ರಶ್ನೆಯೇ ಬರಲ್ಲ. ಇನ್ಮುಂದೆ, ನನ್ನಿಂದಲೇ ಬಹಳ ಜನ ಶಾಕ್ ಅನುಭವಿಸ್ತಾರೆ" ಎಂದು ನನ್ನ ತಂಟೆಗೆ ಬಂದ್ರೆ ಸುಮ್ಮನಿರಲ್ಲ ಎಂಬ ಸಂದೇಶ ರವಾನಿಸಿದರು.
"ನಾನು ಬೇರೆ ದೇಶದಲ್ಲಿ ಲಕ್ಷ ಲಕ್ಷ ಕೋಟಿ ಹಣ ಇಟ್ಟಿದ್ರೆ ಈ ದೇಶ ಆಳುವವರಿಗೆ ತರಲು ಎಷ್ಟೊತ್ತು ಬೇಕು?, ಆ ಹಣ ತಂದ್ರೆ ನಾನೇ ಜನರಿಗೆ ಹಂಚಿ ಬಿಡುವೆ. ಬೇರೆ ಪಾರ್ಟಿಯ ಜನ ನನ್ನ ಜೊತೆ ಬರೋದು ತಡೆಯಲು ಈ ರೀತಿ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಯಾವುದಕ್ಕೂ ನಾನು ತಲೆಕೆಡಿಸಿಕೊಳ್ಳಲ್ಲ. ಈ ರಾಜ್ಯವನ್ನು ಕಲ್ಯಾಣ ರಾಜ್ಯ ಮಾಡುವವರೆಗೆ ನಾನು ಜೀವ ಬಿಡಲ್ಲ. ಹುಲಿ ಬೋನ್‌ನಲ್ಲಿ ಇದ್ರೂ ಕಾಡಲ್ಲಿದ್ರೂ ಹುಲಿಯೇ. ಅದೇ ರೀತಿ ಜನಾರ್ದನ ರೆಡ್ಡಿ ಜೈಲಲ್ಲಿ ಇದ್ರೂ ಜನರ ಬಳಿ ಇದ್ರೂ ಒಂದೇ. ಈ ಹುಲಿ ಬಂದಿದ್ದಕ್ಕೆ ನಿಮ್ಮೂರಿನ ಎರಡು ಜಿಂಕೆಗಳು ಸೇರಿ ರಾಜ್ಯದ ಬಹಳಷ್ಟು ಜಿಂಕೆಗಳು ಮನೆ ಸೇರಿಕೊಳ್ಳುತ್ತಿವೆ" ಎಂದು ಅಬ್ಬರಿಸಿ ಭಾಷಣ ಮಾಡಿದ್ರು.