ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶವು ಹಿಂದುಳಿದ ಭಾಗವಾಗಿದ್ದು, ಈ ಭಾಗದ ಆರ್ಥಿಕ ಪ್ರಗತಿ, ಆಹಾರ ಮತ್ತು ಕೃಷಿ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದರು.
ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಜಗದೀಶ್ ಶೆಟ್ಟರ್ ನಗರದ ಹೆಚ್ಕೆಸಿಸಿಐ ಸಭಾಂಗಣದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಹೈದರಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಗುಲ್ಬರ್ಗಾ ದಾಲ್ ಮಿಲ್ಲರ್ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ರಫ್ತು, ವಿದೇಶ ವ್ಯಾಪಾರ ನೀತಿ ಮತ್ತು ಕಾರ್ಯ ವಿಧಾನಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದ ಸಂವಾದ ಸಭೆ ಉದ್ಘಾಟಿಸಿ ಮಾತನಾಡಿದರು.
ನಗರದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಯಾಗಿದ್ದು, ಮುಂದಿನ ದಿನಗಳಲ್ಲಿ ನಗರವನ್ನು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳು ಆರ್ಥಿಕವಾಗಿ ಸದೃಢವಾಗಲಿದೆ. ಇಲ್ಲಿನ ಕಪನೂರು ಕೈಗಾರಿಕಾ ಪ್ರದೇಶಕ್ಕೆ ತಾವು ಭೇಟಿ ನೀಡಿದ್ದು, ಅಲ್ಲಿನ ಕೈಗಾರಿಕೆಗಳ ಅಭಿವೃದ್ಧಿಗೆ ಮಾರಕವಾಗಿರುವ ರಸ್ತೆಗಳನ್ನು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿವುದಾಗಿ ತಿಳಿಸಿದರು.
ಬೆಂಗಳೂರನ್ನು ಹೊರತುಪಡಿಸಿ ಆರ್ಥಿಕವಾಗಿ ಹಿಂದುಳಿದಿರುವ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಹೊಸ ಕೈಗಾರಿಕಾ ನೀತಿಯಲ್ಲಿ ಸೇರಿಸಲಾಗುವುದು. ಕೈಗಾರಿಕಾ ಸಂಸ್ಥೆಯವರು ಸಲ್ಲಿಸಿರುವ ಮನವಿ ಪತ್ರಗಳನ್ನು ಪರಿಶೀಲಿಸಿ ಪ್ರಾಮಾಣಿಕ ಈಡೇರಿಕೆಗೆ ಪ್ರಯತ್ನಿಸುತ್ತೇನೆ ಎಂದು ಶೆಟ್ಟರ್ ಭರವಸೆ ನೀಡಿದರು.